ಮಂಗಳೂರು: ಪಾರ್ಟಿ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವರ ಪ್ರಜ್ಞೆ ತಪ್ಪಿಸಿ, ನಗ-ನಗದು ದೋಚಿ ಬಳಿಕ ಬ್ಲ್ಯಾಕ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಇನ್ ಲ್ಯಾಂಡ್ ಇಂಪಾಲ ಆಪಾರ್ಟ್‌ಮೆಂಟ್ ನ ಅಝ್ವೀನ್ ಸಿ.ಎಂ (೨೪) ಹಾಗೂ ಬೈಕಂಪಾಡಿ, ಕೆಬಿಎಸ್ ಬೊಟ್ಟು ಹೌಸ್ ಹತೀಜಮ್ಮಯಾನೆ ಸಫ್ನಾ(೨೩) ಬಂಧಿತ ಆರೋಪಿಗಳು
ಘಟನೆಯ ವಿವರ: ದೂರುದಾರರ ಪರಿಚಯಸ್ಥರಾದ ಅಝ್ವೀನ್, ಹಾಗೂ ಹತೀಜಮ್ಮ ಇಬ್ಬರು ಜು.೧೯ ರ ರಾತ್ರಿ ಮನೆಗೆ ಬಂದು ಪಾರ್ಟಿ ಮಾಡುವ ಆಹ್ವಾನ ನೀಡಿ, ಅಮಲು ಪದಾರ್ಥ ಬೆರೆಸಿರುವ ಜ್ಯೂಸ್ ಕುಡಿಸಿ ಪ್ರಜ್ಞೆ ತಪ್ಪಿಸಿದ್ದಾರೆ. ಎಚ್ಚರಗೊಂಡ ವಿವಸ್ತ್ರಗೊಂಡಿದ್ದು, ಆರೋಪಿಗಳು ಮನೆಯಲ್ಲಿ ಇಲ್ಲದಿರುತ್ತಾರೆ. ಈ ವೇಳೆ ಮನೆ ಪರಿಶೀಲಿಸಿದಾಗ ಧರಿಸಿದ್ದ ನವರತ್ನದ ರಿಂಗ್ ಹಾಗೂ ನಗದು ಹಣ ೨,೧೨೦೦ ಕಳ್ಳತನ ಮಾಡಿರುವುದು ಅರಿವಿಗೆ ಬಂದಿದೆ. ಆರೋಪಿ ಅಝ್ವೀನ್ ಮನೆಗೆ ಹೋಗಿ ಈ ಬಗ್ಗೆ ವಿಚಾರಿಸಿದಾಗ ಪೊಲೀಸ್ ದೂರು ನೀಡದಂತೆ, ಹಾಗೂ ಹಣ ಮರಳಿಸುವುದಾಗಿ ಗೋಗರೆದಿದ್ದಾರೆ.
ಆದರೆ ಆ ಬಳಿಕ ಮನೆಗೆ ಬಂದ ಆರೋಪಿಗಳು ದೂರುದಾರರ ನಗ್ನ ಫೋಟೊ ಹಾಗೂ ವಿಡಿಯೋ ತೋರಿಸಿ ತನ್ನಲ್ಲಿ ಹಣ ಕೇಳಿದರೆ ಅಥವಾ ಪೊಲೀಸ್ ದೂರು ದಾಖಲಿಸಿದರೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಮಾನ ಹರಾಜು ಹಾಕುವುದಾಗಿ ಅಲ್ಲದೆ ನನ್ನ ತಂಗಿಯ ಬಲತ್ಕಾರಕ್ಕೆ ಪ್ರಯತ್ನಿಸಿರುವುದಾಗಿ ದೂರು ದಾಖಲಿಸುತ್ತೇವೆ ಎಂದು ಬೆದರಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಳವುಗೈದ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.