ಲಕ್ನೊ: ಟ್ರಕ್ ಒಂದು ನಿಂತಿದ್ದ ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮ 18 ಮಂದಿ ಸ್ಥಳದಲ್ಲಿಯೇ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೊ ವಲಯದ ಬಾರಾಬಂಕಿಯ ರಾಮ್ ಸನೆಹಿ ಘಾಟ್ ಬಳಿ ಕಳೆದ ತಡರಾತ್ರಿ ಸಂಭವಿಸಿದೆ.

ಗಾಯಗೊಂಡಿರುವ 19 ಮಂದಿ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನಡಿ ಸಿಲುಕಿಕೊಂಡಿರುವ ಶವಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಲಕ್ನೊ ವಲಯ ಎಡಿಜಿ ನಾರಾಯಣ್ ಸಬತ್ ತಿಳಿಸಿದ್ದಾರೆ.
ಪ್ರಧಾನಿ ಸಂತಾಪ, ಪರಿಹಾರ ಘೋಷಣೆ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಕುಟುಂಬಸ್ಥರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.