ಮಂಗಳೂರು: ಇಲ್ಲಿನ ಯೆನಪೋಯ ಆಸ್ಪತ್ರೆಯಲ್ಲಿ ಕಳೆದ ಕೆಳವು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್‌ಗೆ ಮಾಡಲಾದ ಮೆದುಳಿನ ಶಸ್ತ್ರ ಚಿಕಿತ್ಸೆ ಯಶಸ್ವಿ ಯಾಗಿದ್ದು ಗುಣಮುಖರಾಗುತ್ತಿದ್ದಾರೆ.
ಆಸ್ಕರ್ ಫರ್ನಾಂಡಿಸ್ ಯೋಗ ಮಾಡುವ ವೇಳೆ ಜಾರಿ ಬಿದ್ದು ತಲೆಯ ಒಳಭಾಗದಲ್ಲಿ ಗಾಯವಾಗಿತ್ತು. ಕಳೆದ ಒಂದು ವಾರದಿಂದ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದ್ದ ಅವರು ತೀವ್ರ ನಿಗಾ ಘಟಕದಲ್ಲಿದ್ದರು. ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದ ಅವರಿಗೆ ಮೆದುಳಿನ ರಕ್ತನಾಳದ ಶಸ್ತ್ರಚಿಕಿತ್ಸೆಯನ್ನು ತಜ್ಞ ವೈದ್ಯರಾದ ಡಾ. ದಿವಾಕರ್ ರಾವ್ ಹಾಗೂ ಡಾ. ಸುನೀಲ್ ಶೆಟ್ಟಿ ನೇತೃತ್ವದ ತಂಡ ನಿನ್ನೆ ತಡರಾತ್ರಿ ಮಾಡಿದೆ.
ಹೆಪ್ಪುಗಟ್ಟಿದ ರಕ್ತವನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದು ವೈದ್ಯರ ಪರಿಶ್ರಮದಿಂದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಶೀಘ್ರವೇ ಪ್ರಜ್ಞೆ ಮರಳುವ ನಿರೀಕ್ಷೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ಗಣ್ಯ ವ್ಯಕ್ತಿಗಳು ಮಂಗಳೂರಿಗೆ ಭೇಟಿ ನೀಡಿ ಆಸ್ಕರ್ ಆರೋಗ್ಯ ಸ್ಥಿತಿ ವಿಚಾರಿಸಿದ್ದರು. ಅದೇ ರೀತಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಹ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಇದೇ ವೇಳೆ ಶ್ರೀಮಂಜುನಾಥ ಸ್ವಾಮಿಯ ಮೂಲ ಗಂಧ ಪ್ರಸಾದವನ್ನು ಆಸ್ಕರ್‌ಗೆ ಹಣೆಗೆ ಹಾಕಿ ಶೀಘ್ರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದ್ದರು. ಈಗ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
ಈ ವಿಚಾರ ಜನಸಮಾನ್ಯರಿಗೆ ತಿಳಿವುತಿದ್ದಂತೆ ಶ್ರೀಮಂಜುನಾಥ ಸ್ವಾಮಿಯ ಮೂಲ ಗಂಧ ಪ್ರಸಾದವೇ ಅವರ ಆರೋಗ್ಯ ಚೇತರಿಸಿಕೊಳ್ಳಲು ಕಾರಣವಾಗಿದೆ ಎಂದು ಜನ ಮಾತನಾಡಿಕೊಳ್ಳುದ್ದರೆ.