Ad Widget .

ಹೆಚ್.ಡಿ.ಕೆ ಬಳಿಕ ಕರ್ನಾಟಕದ ಸಿಎಂ ಪಟ್ಟವೇರಿದ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಪುತ್ರ| ಬಸವರಾಜ ಬೊಮ್ಮಾಯಿ ನಡೆದು ಬಂದ ದಾರಿ|

ಬೆಂಗಳೂರು: ತೀವ್ರ ಪೈಪೋಟಿ, ಕುತೂಹಲ, ಲಾಭಿ, ರಾಜಕೀಯ ಮೇಲಾಟಗಳ ನಡುವೆ ಕೊನೆಗೂ ಕರ್ನಾಟಕದಲ್ಲಿ ಬಿಜೆಪಿಯ ಹೊಸ ಅಲೆ ಮತ್ತೆ ಮೂಡಿದೆ. ಬಿಜೆಪಿ ಹೈಕಮಾಂಡ್ ಅಳೆದು, ತೂಗಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರನ್ನು ಆಯ್ಕೆ ಮಾಡಿದೆ. ಲಿಂಗಾಯತ ವರ್ಗದಿಂದ ಮುಖ್ಯಮಂತ್ರಿಯಾಗಿದ್ದ ಪ್ರಬಲ ಯಡಿಯೂರಪ್ಪರನ್ನು ರಾಜೀನಾಮೆ ಕೊಡಿಸಿ, ಅವರದ್ದೇ ಆಪ್ತ ಬಸವರಾಜ ಬೊಮ್ಮಾಯಿಯವರನ್ನು ಆಯ್ಕೆ ಮಾಡಿದ್ದು, ಮಾಜಿ ಸಿಎಂ ಗೂ ಖುಷಿ ತಂದಿದೆ. ಜೊತೆಗೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮತ್ತೋರ್ವ ಮಾಜಿ ಸಿಎಂ ಪುತ್ರ ರಾಜ್ಯದ‌ ಚುಕ್ಕಾಣಿ ಹಿಡಿದಿದ್ದಾರೆ. ಈ ಹಿಂದೆ ಎಚ್.ಡಿ ದೇವೇಗೌಡರ ಪುತ್ರ ಎಚ್.ಡಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಇದೀಗ ಮಾಜಿ ಸಿಎಂ ದಿ.‌ಎಸ್.ಆರ್ ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

Ad Widget . Ad Widget .

ಯಾರು ಈ ಬೊಮ್ಮಾಯಿ?

Ad Widget . Ad Widget .

ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ಮಾಜಿ ಸಿಎಂ ಎಸ್‌ಆರ್ ಬೊಮ್ಮಾಯಿ-ಚೆನ್ನಮ್ಮ ಅವರ ಪುತ್ರ. 1960 ರ ಜ.28 ರಂದು ಜನಿಸಿದ ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ ಬೊಮ್ಮಾಯಿ ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.

ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ ಶೇ.100 ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಯಡಿಯೂರಪ್ಪ ಅವರ ಸಂಪುಟದಲ್ಲಿ ಮುಖ್ಯಮಂತ್ರಿಗಳ ಬಳಿಕ ಎರಡನೇ ಪ್ರಬಲ ಖಾತೆಯಾದ ಗೃಹ ಖಾತೆಯನ್ನೂ ನಿರ್ವಹಿಸಿ ಅನುಭವ ಹೊಂದಿರುವ ಬೊಮ್ಮಾಯಿ ಅವರು ತಮ್ಮ ರಾಜಕೀಯವನ್ನು ಪ್ರಾರಂಭಿಸಿದ್ದು ಜನತಾದಳದಿಂದ.

ರಾಜಕೀಯ ಇತಿಹಾಸವೇನು?

1998 ಹಾಗೂ 2004 ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. 2008 ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. 2008 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು.

ವಿರೋಧಪಕ್ಷದ ಉಪನಾಯಕ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.

ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್ ಆರ್ ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (1988-89) 32-33 ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ.

Leave a Comment

Your email address will not be published. Required fields are marked *