Ad Widget .

ಚುಡಾಯಿಸುತ್ತಿದ್ದವರು ನಾಚಿಸುವಂತೆ ಬೆಳೆದ ‘ಅಭಿನಯ ಶಾರದೆ’| ದುಂಡುಮಲ್ಲಿಗೆ ಕಮಲಾ‌ಕುಮಾರಿ ಜಯಂತಿ ಆದ‌ ಕಥೆ|

Ad Widget . Ad Widget .

ಬೆಂಗಳೂರು: ದುಂಡಗೆ, ದಪ್ಪಗಿದ್ದ ಬಾಲಕಿಯನ್ನು ಸಹಪಾಠಿಗಳು ಚುಡಾಯಿಸುತ್ತಿದ್ದರು. ಆದರೂ ಆತ್ಮವಿಶ್ವಾಸ ಕುಗ್ಗಿಸಿಕೊಳ್ಳದ ಆ ಬಾಲೆ ಶಾಲೆಯಲ್ಲಿ ನೃತ್ಯ ಮಾಡಿ ಸೈ ಎನ್ನಿಸಿಕೊಂಡಿದ್ದಲ್ಲದೆ, ಪ್ರಶಸ್ತಿಯನ್ನೂ ಪಡೆದು ನಗೆ ಬೀರಿದಳು. ನಿರಂತರವಾಗಿ ತೆಲುಗು ಸಿನಿಮಾಗಳನ್ನು ನೋಡುತ್ತಿದ್ದ ಆ ಬಾಲೆಗೆ ಎ.ನಾಗೇಶ್ವರರಾವ್​ ಮತ್ತು ಎನ್​.ಟಿ. ರಾಮರಾವ್​ ಅವರ ಅಭಿನಯ ಅಂದ್ರೆ ಎಲ್ಲಿಲ್ಲದ ಪ್ರೀತಿ. ಹತ್ತನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಆ ಬಾಲೆಗೆ ತಾನು ಪಂಚಭಾಷಾ ನಟಿ ಆಗುತ್ತೇನೆ, ಅಭಿನಯ ಶಾರದೆ ಎಂಬ ಹೆಸರು ಪಡೆಯುವೆ ಎಂಬ ಒಂದು ಸಣ್ಣ ಸುಳಿವೂ ಇರಲಿಲ್ಲ… ಮುಂದೊಂದು ದಿನ ಇದೆಲ್ಲವೂ ಆಕೆಗೆ ಒಲಿದು ಬಂತು… ಅಂದಹಾಗೆ ಆ ಬಾಲೆ ಹೆಸರು ಕಮಲಕುಮಾರಿ!

Ad Widget . Ad Widget .

ಹೌದು, ಅಂದಿನ ಬಾಲೆ ಕಮಲಕುಮಾರಿಯೇ ಇಂದಿನ ಜಯಂತಿ.

ಆಂಧ್ರ ಮೂಲದ ಪ್ರೊ.ಬಾಲಸುಬ್ರಹ್ಮಣ್ಯಂ ಮತ್ತು ಸಂತಾನಲಕ್ಷ್ಮೀ ಅವರ ಹಿರಿಯ ಪುತ್ರಿ ಕಮಲಕುಮಾರಿ. ಬಾಲಸುಬ್ರಹ್ಮಣ್ಯಂ ಅವರು ಬೆಂಗಳೂರಿನ ಸೆಂಟ್​ ಜೋಸೆಫ್​ ಕಾಲೇಜಿನಲ್ಲಿ ಇಂಗ್ಲಿಷ್​ ಪ್ರೊಫೆಸರ್​ ಆಗಿದ್ದರು. ತಾಯಿ ಆಸೆಯಂತೆ ಕಮಲಕುಮರಿ ಮದರಾಸಿನಲ್ಲಿ ವಿದ್ಯಾಭ್ಯಾಸದ ಜತೆಗೆ ನೃತ್ಯ ಕಲಿಯುತ್ತಿದ್ದರು. ಮುಂದೆ ತಮಿಳಿನ ಖ್ಯಾತ ನಟಿ ಮನೋರಮಾ ಜತೆ ಕಮಲಕುಮಾರಿಯೂ ನೃತ್ಯಾಭ್ಯಾಸ ಮಾಡಿದರು. ದುಂಡಗೆ, ದಪ್ಪಗಿದ್ದ ಈ ವಿದ್ಯಾರ್ಥಿಯನ್ನು ಸಹಪಾಠಿಗಳು ಚುಡಾಯಿಸುತ್ತಿದ್ದರಂತೆ. ಬಾಲ್ಯದಲ್ಲೇ ತೆಲುಗು ಚಿತ್ರ ರಂಗಕ್ಕೆ ಕಾಲಿಟ್ಟ ಕಮಲಕುಮಾರಿ, ಕೃಷ್ಣಲೀಲಾ, ಚೆಂಚುಲಕ್ಷ್ಮೀ ಮುತ್ತಾದ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು. ತೆಲುಗಿನ ‘ಮಾಂಗಲ್ಯಂ’ ಚಿತ್ರದಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ಅಭಿನಯಿಸಿದ್ದರು. 1963ರಲ್ಲಿ ‘ಜೇನುಗೂಡು’ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾಗೆ ಎಂಟ್ರಿಕೊಟ್ಟರು. ಆ ವೇಳೆಗೆ ಕಮಲಕುಮಾರಿ ಅವರು ಜಯಂತಿಯಾಗಿ ತೆಲುಗು, ತಮಿಳು ಚಿತ್ರಗಳಲ್ಲಿ ಹೆಸರು ಗಳಿಸಿದ್ದರು.

ಡಾ.ರಾಜ್​ಕುಮಾರ್​ ಅವರ 50ನೇ ಸಿನಿಮಾ ‘ಚಂದವಳ್ಳಿಯ ತೋಟ’ದಲ್ಲೂ ಜಯಂತಿ ಅಭಿನಯಿಸಿದ್ದರು. ಇದು ಡಾ.ರಾಜ್​ ಅವರ ಜತೆ ಜಯಂತಿ ಅಭಿನಯಿಸಿದ ಮೊದಲ ಚಿತ್ರ. ಚಂದವಳ್ಳಿಯ ತೋಟ(1964) ಚಿತ್ರದಿಂದ ಆರಂಭಿಸಿ ‘ಬಹದ್ದೂರ್​ ಗಂಡು'(1979) ಚಿತ್ರದವರೆಗೆ ರಾಜ್​ ಕುಮಾರ್​ ಅವರೊಂದಿಗೆ 39 ಚಿತ್ರಗಳಲ್ಲಿ ಜತಂಯಿ ನಾಯಕಿಯಾಗಿ ಅಭಿನಯಿಸಿದ್ದರು. ತುಂಬಿದ ಕೊಡ, ಮುರಿಯದ ಮನೆ, ಪ್ರತಿಜ್ಞೆ, ವಾತ್ಸಲ್ಯ, ಬೆಟ್ಟದ ಹುಟಿ, ಮಂತ್ರಾಲಯ ಮಹಾತ್ಮೆ, ಪ್ರೇಮಮಯಿ, ಕಿಲಾಡಿರಂಗ, ಲಗ್ನಪತ್ರಿಕೆ, ದೇವರಗೆದ್ದ ಮಾನವ, ಮನಸ್ಸಿದ್ದರೆ ಮಾರ್ಗ, ಚಕ್ರತೀರ್ಥ, ಇಮ್ಮಡಿ ಪುಲಿಕೇಶಿ, ಜೇಡರಬಲೆ, ಬೆಂಗಳೂರು ಮೈಲ್​, ರೌಡಿ ರಂಗಣ್ಣ, ಸಿಂಹಸ್ವಪ್ನ, ಚೂರಿಚಿಕ್ಕಣ್ಣ, ಪುನರ್ಜನ್ಮ, ಭಲೇರಾಜ, ಚಿಕ್ಕಮ್ಮ, ಶ್ರೀಕೃಷ್ಣದೇವರಾಯ, ಸಿಐಡಿ ರಾಜಣ್ಣ, ನನ್ನ ತಮ್ಮ, ಪರೋಪಕಾರಿ, ಕಸ್ತೂರಿ ನಿವಾಸ, ಬಾಳ ಬಂಧನ, ಕುಲಗೌರವ, ಕ್ರಾಂತಿವೀರ, ನಂದಗೋಕುಲ, ದೇವರುಕೊಟ್ಟ ತಂಗಿ, ಮೂರೂವರೆ ವಜ್ರಗಳು, ಬಹದ್ದೂರ್​ ಗಂಡು ಸಿನಿಮಾಗಳಲ್ಲಿ ಡಾ.ರಾಜ್​ ಜತೆ ಅಭಿನಯಿಸಿದ್ದರು.

ಸಾಹಸಸಿಂಹ ವಿಷ್ಣುವರ್ಧನ್​ ಜತೆ ನಾಗರಹಾವು, ದೇವರುಕೊಟ್ಟ ವರ, ಚಿನ್ನಾ ನಿನ್ನಾ ಮುದ್ದಾಡುವೆ, ಶ್ರೀಮಂತನ ಮಗಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಓಬವ್ವನ ತೋರಿದ ಕೆಚ್ಚೆದೆಯ ಅಭಿನಯ ಇಂದಿಗೂ ಪ್ರೇಕ್ಷರ ಮನದಲ್ಲಿ ದಟ್ಟವಾಗಿದೆ.

ಜಯಂತಿ ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮದಾರಿ ತಪ್ಪಿತು ಹಾಗೂ ಮಸಣದ ಹೂವು ಚಿತ್ರಗಳಲ್ಲಿನ ಅಭಿನಯಕ್ಕಾಗಿ 4 ಬಾರಿ ಇವರಿಗೆ ರಾಜ್ಯ ಸರ್ಕಾರ ಅತ್ಯುತ್ತಮ ನಟಿ ಪ್ರಶಸ್ತಿ ಕೊಟ್ಟು ಗೌರವಿಸಿತ್ತು.

Leave a Comment

Your email address will not be published. Required fields are marked *