ಶಿವಮೊಗ್ಗ: ನಾಲ್ಕು ಬಾರಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಸ್ಥಾನ ಏರಿದರೂ ಪೂರ್ಣಾವಧಿ ಅಧಿಕಾರ ಅನುಭವಿಸದೇ ಅರ್ಧದಲ್ಲೇ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತವರು ಕ್ಷೇತ್ರ ಶಿಕಾರಿಪುರದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.
ರಾಜೀನಾಮೆ ನಿರ್ಧಾರವನ್ನು ಬಿಎಸ್ ವೈ ಪ್ರಕಟಿಸಿರುವ ಬೆನ್ನಲ್ಲೇ ಅಂಗಡಿಗಳನ್ನು ವ್ಯಾಪಾರಿಗಳು ಮುಚ್ಚಿದ್ದು, ಶಿಕಾರಿಪುರ ಬಿಜೆಪಿ ಪಾಳಯದಲ್ಲಿ ಮೌನ ಆವರಿಸಿದೆ.
ಯಡಿಯೂರಪ್ಪ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ. ಆದರೆ ಅವರು ರಾಜಕೀಯವಾಗಿ ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಶಿಕಾರಿಪುರ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಬಳಿಕ 7 ಬಾರಿ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ.
ಶಿಕಾರಿಪುರ ಕ್ಷೇತ್ರದ ಜನ ತಮ್ಮ ನೆಚ್ಚಿನ ನಾಯಕನ ರಾಜೀನಾಮೆ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಬಂದ್ ಮಾಡಿದ್ದಾರೆ.
ಯಡಿಯೂರಪ್ಪ 4 ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ ಒಂದು ಬಾರಿಯೂ ಸಹ ಅಧಿಕಾರ ಪೂರ್ಣಗೊಳಿಸಿಲ್ಲ. ಈ ಹಿಂದಿನ ಮೂರು ಬಾರಿ ವಿವಿಧ ಕಾರಣಗಳಿಂದ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದರೂ, ಈ ಬಾರಿ ಯಾವುದೇ ಕಾರಣವಿಲ್ಲದೇ ಕುರ್ಚಿಯಿಂದ ಇಳಿಯಬೇಕಾಯಿತು. ಪಾದರಸದಂತೆ, ಯುವಕರನ್ನೂ ನಾಚಿಸುವಂತೆ ಕೆಲಸ ಮಾಡುತ್ತಿದ್ದ ಯಡಿಯೂರಪ್ಪರವರನ್ನು ಕೇವಲ ಪ್ರಾಯದ ಕಾರಣ ಮುಂದಿಟ್ಟು ಬಿಜೆಪಿ ಹೈಕಮಾಂಡ್ ರಾಜೀನಾಮೆ ಕೊಡಿಸಿರುವುದು ಯಡಿಯೂರಪ್ಪನವರ ಅಭಿಮಾನಿಗಳ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗ ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಈ ರಾಜೀನಾಮೆಗೆ ವಿರೋಧ ವ್ಯಕ್ತವಾಗಿದೆ. ಒಟ್ಟಾರೆ ಕಟ್ಟಿದ ಕೋಟೆಯೊಳಗಿಂದ ಯಜಮಾನನನ್ನು ಹೊರಹಾಕಿದ ಬಿಜೆಪಿ ಮುಂದೊಮ್ಮೆ ಇದಕ್ಕೆ ತಕ್ಕ ಫಲ ಅನುಭವಿಸಿದರೆ ಅತಿಶಯೋಕ್ತಿಯಲ್ಲ.