ಭಟ್ಕಳ: ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನವಾಗಿದ್ದರೂ, ಕೋರ್ಟ್ ಆತನನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿದ್ದು, ಸದ್ಯ ನೈಜ ಆರೋಪಿಗಳ ಪತ್ತೆಗಾಗಿ ಪೊಲೀಸ್ ಇಲಾಖೆಗೆ ಸೂಚಿಸಿದೆ. ಇತ್ತ ಯಾವ ತಪ್ಪು ಮಾಡದೆಯೂ ಸುಮಾರು ಆರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿ, ತನ್ನ ಮೇಲೆ ಆರೋಪ ಹೊರಿಸಿ, ಜೈಲಿಗಟ್ಟಿದ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಿಡಿಶಾಪ
ಮಾತ್ರ ವಿಪರ್ಯಾಸ.
ಘಟನೆ ವಿವರ: ಸುಮಾರು ಹತ್ತು ವರ್ಷಗಳ ಹಿಂದೆ, ಅಂದರೆ 2010 ರ ಅಕ್ಟೋಬರ್ 23ರಂದು ಮುರ್ಡೇಶ್ವರದ ಹಿರೇಂದೋಮಿ ಎಂಬಲ್ಲಿ ಯುವತಿಯೊಬ್ಬಳನ್ನು ಕಾಮುಕರ ತಂಡವೊಂದು ಅತ್ಯಾಚಾರ ಮಾಡಿ ಕೊಲೆ ನಡೆಸಿತ್ತು. ಈ ಪ್ರಕರಣ ಭಟ್ಕಳ ಪ್ರದೇಶದಲ್ಲಿ ಕೋಮು ಗಲಭೆಗೂ ಕಾರಣವಾಗಿತ್ತು.
ಪ್ರಕರಣ ನಡೆದು ಮೂರು ದಿನ ಕಳೆದರೂ ಆರೋಪಿಗಳ ಬಂಧನವಾಗಲಿಲ್ಲ ಎಂದು ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾಗಿದ್ದವು. ಅಂದಿನ ಗಲಭೆ ನಿಯಂತ್ರಿಸಲು ಪೊಲೀಸ್ ಪಡೆ ಇದೆಲ್ಲವನ್ನು ಅರಿತ ಅಂದಿನ ಡಿವೈಎಸ್ಪಿ ನಾರಾಯಣ ರಾವ್ ಕೂಡಲೇ ಆರೋಪಿ ಎಂದು ವ್ಯಕ್ತಿಯೊಬ್ಬನನ್ನು ಜೀಪಿನಲ್ಲಿ ಕುಳ್ಳಿರಿಸಿಕೊಂಡು ಬಂದು ಜೈಲಿಗಟ್ಟಿದರು. ಆದರೆ, ಇಲ್ಲಿ ಆರೋಪಿ ಎಂದು ಬಂಧಿತನಾದ ವ್ಯಕ್ತಿ ಆಕೆಯ ನೆರೆಮನೆಯಾತ ಆಗಿದ್ದರಿಂದ, ಎಲ್ಲರೂ ಆತನೇ ಆರೋಪಿಯಾಗಿರಬಹುದು ಎಂದು ನಂಬಿದ್ದರು. ಯುವತಿಯ ಮನೆಯವರು ಕೆಲ ಶಂಕಿತರ ಪಟ್ಟಿಯನ್ನು ಪೊಲೀಸರಿಗೆ ನೀಡಿದ್ದರೂ ಕೂಡಾ ಆ ಆರೋಪಿಗಳನ್ನು ಬಂಧಿಸದೆ ಈತನೊಬ್ಬನನ್ನು ಬಂಧಿಸಿ ಕೇಸ್’ನ್ನು ಮುಚ್ಚಿಹಾಕಲಾಯಿತು. ಬಂಧಿತ ವ್ಯಕ್ತಿಯ ಮಡದಿ ಹಾಗೂ ಸಣ್ಣ ಪುಟ್ಟ ಮಕ್ಕಳು ಬೀದಿಗೆ ಬಂದರೂ, ಯಾವೊಬ್ಬ ರಾಜಕಾರಣಿಯೂ ಸಹಾಯಕ್ಕೆ ಧಾವಿಸಲಿಲ್ಲ.
ವಾದ ಪ್ರತಿವಾದಗಳು ಕೋರ್ಟ್ ನಲ್ಲಿ ನಡೆಯುತ್ತಲೇ ಹೋಯಿತು. ಆರೋಪಿ ಪರ ಪ್ರಸಿದ್ಧ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದ ಮಂಡಿಸಿದರೂ, ಆರು ವರ್ಷಗಳ ಬಳಿಕ ಧಾರವಾಡ ಹೈಕೋರ್ಟ್ ಆರೋಪಿಯು ತಪ್ಪೆಸಗಿರುವುದು ಸಾಬೀತಾಗದೆ ಹಾಗೂ ಆಕೆಯ ದೇಹದ ಮೇಲಿದ್ದ ವೀರ್ಯಾಣು ಈತನದ್ದಲ್ಲ ಎಂದು ಖಚಿತವಾದ ಕಾರಣ ನಿರಪರಾಧಿ ಎಂದು ಖುಲಾಸೆ ಗೊಳಿಸಿತು. ಇಲ್ಲಿಗೇ, ಕೊಲೆ ಕೇಸ್ ನ ನೈಜ ಆರೋಪಿಗಳ ಪತ್ತೆಗೆ ದಾರಿ ಮಾಡಿ ಕೊಟ್ಟಹಾಗೆ ಆಯಿತಾದರೂ, ಶಂಕಿತರ ಬಂಧನಕ್ಕೆ ಫೋರೆನ್ಸಿಕ್ ಲ್ಯಾಬ್ ರಿಪೋರ್ಟ್ ಬರಬೇಕಷ್ಟೆ.
ಶಂಕಿತ ವ್ಯಕ್ತಿಗಳಾದ ಮಹಮ್ಮದ್ ಸಾದಿಕ್, ಆಸೀಫ್, ಮಹಮ್ಮದ್ ನಿಸಾರ್, ಯಾಸಿನ್ ಶೇಖ್, ಸಿದ್ಧಿ ಮೊಹಮ್ಮದ್ ಸಹಿತ ಒಂಭತ್ತು ಜನ ಶಂಕಿತರ ವೀರ್ಯ, ರಕ್ತ ಹಾಗೂ ಕೂದಳನ್ನು, ಯುವತಿಯ ದೇಹದಲ್ಲಿದ್ದ ವೀರ್ಯಾಣುವಿನೊಂದಿಗೆ ತಾಳೆ ಮಾಡಿ ನೋಡಲು ಹೈದರಾಬಾದ್ ಕೇಂದ್ರ ಪ್ರಯೋಗಲಾಯಕ್ಕೆ ಕಳುಹಿಸಿಕೊಡಲು ಸೂಚಿಸಲಾಗಿದೆ. ಇನ್ನು ಈ ಪ್ರಕರಣದಲ್ಲಿ ಕೇಳಿ ಬಂದಿದ್ದ ಇಬ್ಬರು ಮಹಿಳೆಯರ ಹೆಸರನ್ನು ಪ್ರಕರಣದಿಂದ ತೆಗೆದುಹಾಕಲಾಗಿದೆ.
ಸದ್ಯ ಈ ಪ್ರಕರಣದಲ್ಲಿ ನ್ಯಾಯ ಮರೀಚಿಕೆಯಾಗಿದ್ದರೂ, ನಿರಪರಾಧಿಯನ್ನು ಅಪರಾಧಿ ಎಂದು ಶಿಕ್ಷಿಸಿದ್ದು ಮಾತ್ರ ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ. ಇನ್ನಾದರೂ ನೈಜ ಆರೋಪಿಗಳ ಬಂಧನವಾಗಬಹುದೇ? 10 ವರ್ಷಗಳ ಹಿಂದೆ ನಡೆದ ಆಕೆಯ ಸಾವಿಗೆ ಇನ್ನಾದರೂ ನ್ಯಾಯ ಸಿಗಬಹುದೇ ಎಂದು ಕಾದುನೋಡಬೇಕಾಗಿದೆ.