ಸಮಾಚಾರ ವಿಶೇಷ: ನಮ್ಮ ಹೆಮ್ಮೆಯ ಯೋಧರಿಗೆ ಗೌರವ ಸೂಚಿಸುವ ‘ಕಾರ್ಗಿಲ್ ವಿಜಯ ದಿವಸ’ಕ್ಕೆ ಇಂದು 22ರ ಸಂಭ್ರಮ ಇಪ್ಪತ್ತೆರಡು ವರ್ಷಗಳ ಹಿಂದೆ, ಪಾಕಿಸ್ತಾನದ ಸಂಚನ್ನು ಪ್ರತಿಬಂಧಿಸಿ ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲಾ ರಕ್ಷಿಸಿದ್ದರು. ಅಂಥಾ ವೀರಯೋಧರಿಗೆ ನಮನ ಸಲ್ಲಿಸಲು ಜೂನ್ 26ನ್ನು ಪ್ರತಿ ವರ್ಷ ಕಾರ್ಗಿಲ್ ದಿವಸವನ್ನಾಗಿ ಆಚರಿಸುತ್ತೇವೆ. ತ್ಯಾಗ ಬಲಿದಾನದ ಮಾಸದ ನೆನಪು ಇಂದಿಗೂ ಹಸಿಯಾಗಿದೆ.
ಸದಾ ಭಾರತದ ಕೆಡುಕನ್ನೇ ಬಯಸುವ ಕಪಟಿ ಪಾಕಿಸ್ತಾನ ಒಂದು ಕಡೆಯಿಂದ ಅಂದಿನ ಪ್ರಧಾನಿ ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಇನ್ನೊಂದು ಕಡೆಯಿಂದ ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರಿನಲ್ಲಿ ನವಾಜ್ ಶರೀಫ್, ಪ್ರಧಾನಿ ವಾಜಪೇಯಿ ಅವರ ಕೈಕುಲುಕುತ್ತಿರುವಾಗ ಇತ್ತ ಗಡಿ ಭಾಗದಲ್ಲಿ ತನ್ನ ಸೇನೆಯನ್ನು ಜಮಾಗೊಳಿಸಿ, ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿತ್ತು. ಸ್ನೇಹ ಹಸ್ತ ಚಾಚುತ್ತಾ ಭಾರತ ಎಲ್ಲೋ ಒಂದು ಬದಿಯಲ್ಲಿ ಪಾಕಿಸ್ತಾನವನ್ನು ನಂಬಿ ಮೈಮರೆತಿತ್ತು.
ವಿಶ್ವಕ್ಕೆ ಶಾಂತಿ ಸಾರಿದ ರಾಷ್ಟ್ರ ನಮ್ಮದು. ಆದರೆ ಪಕ್ಕದ ರಾಷ್ಟ್ರ ನಮ್ಮ ಮೇಲೆ ಆಕ್ರಮಣ ಮಾಡಲು ಬರಬಹುದು ಎಂದು ಊಹಿಸಿಕೊಳ್ಳುವುದಕ್ಕೂ ಮುಂಚೆಯೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ವಾಜಪೇಯಿ ಸರಕಾರದ ವೈಫಲ್ಯವಿದು ಅಂತಾ ಸರಕಾರದ ಮೇಲೆ ಪ್ರತಿಪಕ್ಷ ಗಳು ಮುಗಿಬಿದ್ದವು. ಕೆಲವೊಂದಷ್ಟು ಜನ ಇನ್ನೂ ಮುಂದಕ್ಕೆ ಹೋಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟು ಬಿಡಿ ಎಂದರು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ರಾಜೀನಾಮೆ ನೀಡಬೇಕೆಂಬ ಒತ್ತಡವಿದ್ದರೂ ಯಾವುದಕ್ಕೂ ಬಗ್ಗದೇ ಸೇನೆಗೆ ಶಕ್ತಿ ತುಂಬಿದರು.
ಪ್ರಧಾನಿಯ ಆದೇಶ ಬಂದ ತಕ್ಷ ಣ ಸೇನೆ ತನ್ನ ಕಾರ್ಯಾಚರಣೆಯನ್ನು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಪ್ರಾರಂಭಿಸಿತು. ಇತ್ತ ಉಕ್ಕಿನ ಮನುಷ್ಯಅಡ್ವಾಣಿ ತಕ್ಷ ಣವೇ ಇಸ್ರೇಲ್‌ಗೆ ತೆರಳಿ ಮದ್ದುಗುಂಡು ಹಾಗು ಅಗತ್ಯ ಸೇನಾ ನೆರವು ಪಡೆದುಕೊಂಡು ಬಂದರು. ಯುದ್ಧ ನಡೆಯುತ್ತಿದ್ದ ಸ್ಥಳದ ಪರಿಸ್ಥಿತಿಯ ಅವಲೋಕನ ನಡೆಸಿ ಅತ್ಯಂತ ಕೆಟ್ಟ ಹವಾಮಾನ, ಕೈಯಲ್ಲಿರುವ ಕಳಪೆ ಸಾಮಾಗ್ರಿಗಳು, ವೈರಿಪಡೆಯ ಅತ್ಯಾಧುನಿಕ ಆಯುಧಗಳ ನಡುವೆಯೂ ನಮ್ಮ ಸೇನೆ ಧೃತಿಗೆಡದೆ ಆಪರೇಷನ್ ವಿಜಯ್ ಮೂಲಕ ಹೋರಾಟ ನಡೆಸುತ್ತಾ ಒಂದೊಂದೇ ಸ್ಥಳವನ್ನು ವಾಪಸ್ಸು ಪಡೆಯಿತು.
74 ದಿನಗಳ ಕಾಲ ನಡೆದ ಯುದ್ಧದಲ್ಲಿ ದಿನಕ್ಕೆ 15 ಕೋಟಿಯಂತೆ ಸುಮಾರು 1100 ಕೋಟಿಗಳಷ್ಟು ಹಣ ವ್ಯಯಿಸಲಾಗಿತ್ತು. ಖರ್ಚಾದ ಹಣವಿರಲಿ, ಆದರೆ ದೇಶ ಅದೆಷ್ಟೋ ಯುವ ಸೇನಾನಿಗಳನ್ನು ಕಳೆದುಕೊಂಡಿತ್ತು. ನಮ್ಮವರು 527, ಪಾಕಿಸ್ತಾನದವರು 696 ಜನ ಸಾವಿಗೀಡಾದರು. ಜುಲೈ 26ರಂದು ಕಾರ್ಗಿಲ್‌ನ ಕೊನೆಯ ಠಾಣೆಯನ್ನು ಭಾರತೀಯ ಸೇನೆ ವಶಪಡಿಸಿಕೊಂಡು ಗೆಲುವು ಘೋಷಿಸಿತು. ಅದುವೇ ಕಾರ್ಗಿಲ್ ವಿಜಯ ದಿವಸ.
ಅಂದು ಭಾರತ ಪಾಕಿಸ್ತಾನದ ಒಳಗೆ ಹೋಗಿ ಯುದ್ಧ ಮಾಡಿರಲಿಲ್ಲ. ಅಂತಾರಾಷ್ಟ್ರೀಯ ಗಡಿರೇಖೆ ಉಲ್ಲಂಘಿಸಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಯುದ್ಧ ಗೆದ್ದಿತ್ತು. ಸೇನೆಯಲ್ಲಿ ಮದ್ದು ಗುಂಡುಗಳಿರದಿದ್ದರೂ ಯೋಧರ ಆತ್ಮವಿಶ್ವಾಸ ಕಾರ್ಗಿಲ್‌ನ ಎತ್ತರದ ಬೆಟ್ಟಗುಡ್ಡಗಳನ್ನೂ ಮೀರಿಸುವಂತಿತ್ತು. ಹೀಗೆ ಪಾಕಿಸ್ತಾನಕ್ಕೆ ನಮ್ಮ ಯೋಧರು ಪಾಠ ಕಲಿಸಿ 22 ವರ್ಷ ಸಂದಿದೆ. ವಿಜಯದ ಸಂಕೇತವಾಗಿ ಹುತಾತ್ಮರಿಗೆ ನಮನಗಳನ್ನು ಸಲ್ಲಿಸಲು ಜುಲೈ 26ನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಹುತಾತ್ಮ ಯೋಧರಿಗೆ ನಮನಗಳು.