ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆ, ಪ್ರವಾಹ ಪರಿಸ್ಥಿತಿಯ ನಡುವೆಯೂ, ರಾಜಕೀಯ ಮೇಲಾಟಗಳು ನಡೆಯುತ್ತಿದ್ದು, ಎಲ್ಲರ ಚಿತ್ತ ದೆಹಲಿ ಸಂದೇಶದತ್ತ ನೆಟ್ಟಿದೆ. ಹೈಕಮಾಂಡ್ ಯಡಿಯೂರಪ್ಪರನ್ನು ತೆರಳಲು ಸೂಚಿಸುತ್ತಾ? ಅಥವಾ ಮುಂದುವರೆಸುತ್ತಾ? ಎಂಬ ಪ್ರಶ್ನೆಗಳು ಮೂಡಿದ್ದು, ಸಿಎಂ ಆಕಾಂಕ್ಷಿಗಳೂ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಲು ಕಾದು ಕುಳಿತಿದ್ದಾರೆ.
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನಾಳೆ(ಜು.26)ಗೆ ಎರಡು ವರ್ಷ ಪೂರೈಸಲಿದ್ದು, ಈ ಸಂತೋಷವನ್ನು ಹಂಚಿಕೊಳ್ಳಲು ಸ್ವತಃ ಯಡಿಯೂರಪ್ಪನವರಿಗೇ ಆಸಕ್ತಿ ಇದ್ದಂತಿಲ್ಲ. ಈ ನಡುವೆ ರಾಜ್ಯದ ಉತ್ತರ ಕರ್ನಾಟಕ ,ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ತಲೆಎತ್ತಿದ್ದು, ಮುಖ್ಯಮಂತ್ರಿಗಳು ದಿಢೀರ್ ವೈಮಾನಿಕ ಸಮಿಕ್ಷೆಗೆ ತೆರಳಿದ್ದಾರೆ. ಇದು ಕೇಂದ್ರ ನಾಯಕರಿಗೆ ತಾನಿನ್ನೂ ‘ಯಂಗ್ ಅ್ಯಂಡ್ ಎನರ್ಜಿಟಿಕ್’ ಎಂಬ ಸಂದೇಶ ನೀಡುವ ಕಾರ್ಯ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇನ್ನು ಸಿಎಂ ರೇಸ್ ನಲ್ಲಿರುವ ಹಲವರು ಮನಸ್ಸಲ್ಲೇ ಮಂಡಿಗೆ ತಿನ್ನುತ್ತಿದ್ದು, ಕುರ್ಚಿ ಏರಲು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಪ್ರಮುಖರಾದ ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸವದಿ ಸೇರಿದಂತೆ ಘಟಾನುಘಟಿ ನಾಯಕರು ವಿಧಾನ ಸೌದದ ಸುತ್ತ ಪರೇಡ್ ಆರಂಭಿಸಿದ್ದಾರೆ.
ಇವೆಲ್ಲದರ ಮಧ್ಯೆ ಎಲ್ಲ ತೊರೆದ ಮಠಾಧಿಪತಿಗಳೂ ದುತ್ತೆಂದು ರಾಜಕೀಯದ ಅಖಾಡಕ್ಕೆ ಇಳಿದಿರುವುದು ಅಚ್ಚರಿ ಮೂಡಿಸಿದೆ. ಇಂದು ಬೆಂಗಳೂರಿನಲ್ಲಿ ಸೇರಿರುವ ಲಿಂಗಾಯತ ಸ್ವಾಮೀಜಿಗಳ ತಂಡ ಸಿಎಂ ಸ್ಥಾನದಲ್ಲಿ ಯಡಿಯೂರಪ್ಪನವರನ್ನೇ ಮುಂದುವರಿಸಲು ಪಟ್ಟು ಹಿಡಿದಿದ್ದಾರೆ.
ಈ ಎಲ್ಲಾ ವಿದ್ಯಮಾನಗಳನ್ನು ದೂರದಿಂದಲೇ ಗಮನಿಸುತ್ತಿರುವ ಬಿಜೆಪಿ ಹೈಕಮಾಂಡ್ ನಾಯಕ ಜೆ.ಪಿ ನಡ್ಡಾ ಯಾವ ಸಂದೇಶ ಹೊತ್ತು ತರುತ್ತಾರೋ ಕಾದು ನೋಡಬೇಕಿದೆ.
ಸಮಗ್ರ ಸಮಾಚಾರ:ಪೊಲಿಟಿಕಲ್ ಬ್ಯೂರೋ