ಮಂಗಳೂರು: ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವಾರು ಕಡೆ ಅವಘಡಗಳು ಸಂಭವಿಸುತ್ತಿರುವ ನಡುವೆಯೇ ಕೊರೊನಾ ಹಾವಳಿಯೂ ಮುಂದುವರೆದಿದೆ. ರಾಜ್ಯದ ಒಟ್ಟು ಕೇಸ್ ಗಳನ್ನು ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ದಿನೇದಿನೇ ಏರಿಕೆ ಕಾಣಿಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ.
ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಶುಕ್ರವಾರ 300 ಇದ್ದ ಹೊಸ ಕೇಸ್ ಗಳು ಶನಿವಾರ 269 ಕ್ಕೆ ಇಳಿಕೆಯಾಗಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಒಟ್ಟು ಸಕ್ರಿಯ ಪ್ರಕರಣಗಳು 2105 ಇದ್ದು, ಇನ್ನೂ ಹೆಚ್ಚಾಗುವ ಲಕ್ಷಣ ಕಂಡುಬರುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಫಾಸಿಟಿವಿಟಿ ದರದಲ್ಲೂ ಏರಿಕೆಯಾಗಿದ್ದು, ಸದ್ಯ 4.46% ಇದೆ. ಈ ಅಂಕಿಅಂಶಗಳು ಜಿಲ್ಲೆಯನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಸೋಂಕಿತರಿಗೆ ಹೋಲಿಸಿದರೆ ಆಸ್ಪತ್ರಯಿಂದ ಬಿಡುಗಡೆಯಾದವರ ಸಂಖ್ಯೆಯೂ ಹೆಚ್ಚಾಗಿದೆ. ಶುಕ್ರವಾರ 179 ಹಾಗೂ ಶನಿವಾರ 239 ಮಂದಿ ಡಿಸ್ಚಾರ್ಜ್ ಆದರೂ ಕೇಸ್ ಹೆಚ್ಚಳ ಮತ್ತು ಪಾಸಿಟಿವಿಟಿ ದರ ಹೆಚ್ಚಿರುವುದು ಶುಭಸೂಚನೆ ಅಲ್ಲ.
ಕೇರಳ ಗಡಿಯಲ್ಲಿ ಕಟ್ಟುನಿಟ್ಟಿಲ್ಲದ ತಪಾಸಣೆ, ಜನಸಂದಣಿ ಏರಿಕೆ ಹಾಗೂ ಮಾರ್ಗಸೂಚಿಗಳ ಕಡೆಗಣನೆಯೇ ಈ ಏರಿಕೆಗೆ ಕಾರಣವಾಗಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜೊತೆ ಸಾರ್ವಜನಿಕರು ಕೈಜೋಡಿಸಿದರೆ ಮತ್ತೆ ಲಾಕ್ ಡೌನ್ ಹೇರುವುದನ್ನು ತಪ್ಪಿಸಬಹುದು.