ಬಿಹಾರ: ಯುವಕನ ಲಾಕಪ್ ಡೆತ್ ವಿರೋಧಿಸಿ ಉದ್ರಿಕ್ತ ಗುಂಪು ಪ್ರತಿಭಟನೆ ನಡೆಸಿದ್ದು ಅಲ್ಲದೆ ಪೊಲೀಸರ ಮೇಲೆ ಕಲ್ಲು ತೂರಾಟ, ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್ ಮಹಿಳಾ ಪೇದೆ ಸಾವನ್ನಪ್ಪಿದ್ದಾರೆ.
ಪ್ರತಿಭಟನಾಕಾರರು ಉದ್ರಿಕ್ತರಾಗಿ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಮಡು ತೂರಿದ್ದಾರೆ. ಕಲ್ಲು ತೂರಾಟದ ವೇಳೆ ಹಲವಾರು ಪೊಲೀಸರು ಗಾಯಗೊಂಡಿರುವುದಾಗಿ ಜಿಹಾನಾಬಾದ್ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರತಿಭಟನೆಯಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಆರ್ವಾಲ್- ಜಿಹಾನಾಬಾದ್ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಮದ್ಯ ವ್ಯಾಪಾರದಲ್ಲಿ ತೊಡಗಿದ್ದಕ್ಕಾಗಿ ಈ ಹಿಂದೆ ಗೋವಿಂದ್ ಮಾಂಝಿ ಎಂಬಾತನನನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದ ಆದೇಶದ ಹಿನ್ನೆಲೆಯಲ್ಲಿ ಆತನನ್ನು ಔರಂಗಾಬಾದ್ ಜಿಲ್ಲೆಯ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಆತನ ಗ್ರಾಮಸ್ಥರಿಗೆ ತಲುಪಿತ್ತು. ಇನ್ನು ಗೋವಿಂದ ಗೆ ದೈಹಿಕ ಚಿತ್ರಹಿಂಸೆಯಿಂದಾಗಿ ಸಾವನ್ನಪ್ಪಿದ್ದಾನೆ ಎಂದು ಆರೋಪಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆಯಲು ಯತ್ನಿಸಿದ್ದಾರೆ. ಇದರಿಂದ ಕೋಪಗೊಂಡ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ.
ಉದ್ರಿಕ್ತರನ್ನು ಚದುರಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೇದೆ ಕಾಂತಿ ದೇವಿ ಅವರಿಗೆ ವಾಹನ ಡಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ಎಸ್ ಡಿಪಿಒ ತಿಳಿಸಿದ್ದಾರೆ.