ಮಂಗಳೂರು: ಭಾರತೀಯ ವಾಯುಪಡೆಯ ಎನ್-32 ವಿಮಾನ 29 ಯೋಧರ ಸಹಿತ ಕಣ್ಮರೆಯಾಗಿ ಇಂದಿಗೆ 5 ವರ್ಷ ಕಳೆದಿದೆ. ಅದಾದ ಬಳಿಕ, ವಿಮಾನದ ಒಂದೇ ಒಂದು ಅಥವಾ ಯಾವೊಬ್ಬ ಯೋಧರ ಮೃತದೇಹವೂ ಸಿಗದೇ ಪ್ರಕರಣ ಇಂದಿಗೂ ನಿಗೂಢವಾಗಿ ಉಳಿದಿದೆ.
ಭಾರತೀಯ ವಾಯುಸೇನೆಯ ಎನ್-32 ವಿಮಾನ, 2016 ಜುಲೈ 22ರಂದು ಚೆನೈನ ತಂಬಾರಮ್ ಏರ್‌ಬೇಸ್‌ನಿಂದ ಅಂಡಮಾನಿನ ಫೋರ್ಟ್‌ಬ್ಲೇರ್ ನೆಲೆಗೆ ತೆರಳುತ್ತಿತ್ತು. ವಾಯುಸೇನೆಯ 29 ಯೋಧರಿದ್ದ ವಿಮಾನ ಹೊರಟು ಕೆಲವೇ ಸಮಯದಲ್ಲಿ ಸಂಪರ್ಕ ಕಡಿತವಾಗಿತ್ತು. ಬಳಿಕ ನಾಪತ್ತೆ ಯಾಗಿತ್ತು.
ಕಣ್ಮರೆಯಾದ ಬಳಿಕ ಸತತ ಹುಡುಕಾಟ ನಡೆಸಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ನಾಸಾ, ಇಸ್ರೋ ಸಹಾಯ ಪಡೆದು ಭಾರತದ ಮೂರೂ ವಿಭಾಗದ ಸೇನೆ ಹುಡುಕಾಟ ನಡೆಸಿದರೂ ಸಣ್ಣ ಕುರುಹು ಕೂಡ ಪತ್ತೇಯಾಗಿರಲಿಲ್ಲ. ಅರಬ್ಬೀ ಸಮುದ್ರದಾದ್ಯಂತ ಜಾಲಾಡಿದರೂ ಒಬ್ಬ ಯೋಧನ ಮೃತದೇಹವೂ ಸಿಕ್ಕಿರಲಿಲ್ಲ. ಅತ್ಯಾದುನಿಕ ನೌಕೆ, ವಿಮಾನ ಬಳಸಿ ಕಾರ್ಯಾಚರಣೆ ನಡೆಸಿದರೂ ವಿಮಾನದ ಮಾಹಿತಿ ತಿಳಿಯಲೇ ಇಲ್ಲ. ಕೊನೆಗೆ ಭಾರತ ಸರ್ಕಾರ ವಿಮಾನ ಸಮುದ್ರದಲ್ಲಿ ಪತನಗೊಂಡು, ಎಲ್ಲಾ 29 ಯೋಧರು ಮೃತಪಟ್ಟಿದ್ದಾರೆ ಎಂದು ಹೇಳಿತ್ತು.
ಒಟ್ಟು 29 ಯೋಧರ ಪೈಕಿ ಕರುನಾಡಿನ ಏಕೈಕ ಯೋಧ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಏಕನಾಥ ಶೆಟ್ಟಿ ಕೂಡ ಇದ್ದರು. ಬಾಲ್ಯದಲ್ಲಿಯೇ ಸೇನೆ ಸೇರುವ ಮಹಾತ್ವಕಾಂಕ್ಷೆ ಇಟ್ಟುಕೊಂಡಿದ್ದ ಏಕನಾಥ ಶೆಟ್ಟಿ 1985 ರಲ್ಲಿ ಭೂ ಸೇನೆ ಸೇರಿದ್ದರು. ಸೇನೆಯಲ್ಲಿ ಸುಭೇದಾರ್ ಆಗಿದ್ದ ಇವರು, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಅರುಣಾಚಲ ಪ್ರದೇಶ ಮುಂತಾದೆಡೆ ಸೇವೆ ಸಲ್ಲಿಸಿದ್ದರು. ಅದಲ್ಲದೆ ಶ್ರೀಲಂಕಾದಲ್ಲಿ ಭಾರತೀಯ ಶಾಂತಿಪಾಲನ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ 2009ರಲ್ಲಿ ಭೂಸೇನೆಯಿಂದ ನಿವೃತ್ತರಾಗಿದ್ದರು.
ಆನಂತರವೂ ಸೇನೆಯಲ್ಲಿ ಸೇವೆ ಸಲ್ಲಿಸುವ ತುಡಿತ ಬಿಡದೆ ಪುನಃ ವಾಯುಸೇನೆ ಸೇರಿದ್ದರು. ಬಳಿಕ ಕಣ್ಮರೆಯಾದ ವಿಮಾನದಲ್ಲಿದ್ದ ಅವರು ಹುತಾತ್ಮರಾಗಿದ್ದರು. ಏಕನಾಥ್ ಶೆಟ್ಟಿ ಕಣ್ಮರೆಯಾಗಿ 5 ವರ್ಷವಾದ ಹಿನ್ನಲೆಯಲ್ಲಿ ಅವರ ಪತ್ನಿ ಜಯಂತಿ ಶೆಟ್ಟಿ ಮತ್ತು ಕುಟುಂಬಸ್ಥರು ಗಿಡ ನೆಟ್ಟು ನೆನಪನ್ನು ಅಜರಾಮರವಾಗಿಸಿಕೊಂಡಿದ್ದಾರೆ.