ಮಂಗಳೂರು: ವಿಮಾನ ನಿಲ್ದಾಣ ಸಿಬ್ಬಂದಿ, ತಾಯಿಯೊಂದಿಗೆ ತವರಿಗೆ ಹೊರಟ ಆರು ತಿಂಗಳ ಮಗುವಿನ ನೆಗೆಟಿವ್ ರಿಪೋರ್ಟ್ ಕೇಳಿ ಗೊಂದಲ ಉಂಟಾದ ಘಟನೆ ಕುವೈತ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಭಾರತೀಯ ವಿದೇಶಾಂಗ ಇಲಾಖೆ ತಾಯಿ-ಮಗುವಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ.
ಕುವೈತ್ ನಲ್ಲಿದ್ದ ಮಂಗಳೂರು ಮೂಲದ ಅದಿತಿ ಸುದೇಶ್ ಎಂಬ ಮಹಿಳೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ತುರ್ತಾಗಿ ಮಂಗಳೂರಿಗೆ ಆಗಮಿಸುವವರಿದ್ದರು. ಇದಕ್ಕಾಗಿ ತನ್ನ ಕೋವಿಡ್ ನೆಗೆಟಿವ್ ರಿಪೋರ್ಟ್ ತಂದಿದ್ದರು. ಆದರೆ ಜೊತೆಗಿದ್ದ ತನ್ನ 6 ತಿಂಗಳ ಮಗುವಿನ ರಿಪೋರ್ಟ್ ತಂದಿರಲಿಲ್ಲ. ಮಗುವಿನ ರಿಪೋರ್ಟ್ ಅಗತ್ಯತೆ ಬಗ್ಗೆ ಮೊದಲೇ ಏರ್ ಇಂಡಿಯಾ ಸಂಪರ್ಕಿಸಿ ವಿಚಾರಿಸಲಾಗಿತ್ತು. ಆಗ ಮಗುವಿನ ರಿಪೋರ್ಟ್ ಅಗತ್ಯ ಇಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿತ್ತು.
ಆದರೆ ಮಗುವಿನ ರಿಪೋರ್ಟ್ ಇಲ್ಲ ಎಂಬ ಕಾರಣಕ್ಕೆ ತಾಯಿ-ಮಗುವಿನ ಪ್ರಯಾಣಕ್ಕೆ ವಿಮಾನ ನಿಲ್ದಾಣದ ಸಿಬ್ಬಂದಿ ತಡೆಹಿಡಿದಿದ್ದಾರೆ. ಮಹಿಳೆಗೆ ಗಲಿಬಿಲಿ ಉಂಟಾಗಿದ್ದು ತಕ್ಷಣ ತಮ್ಮ ಪತಿಯನ್ನು ಸಂಪರ್ಕಿಸಿದ್ದಾರೆ. ಪತಿ ತಮ್ಮ ಗೆಳೆಯ ಮೋಹನ್ ದಾಸ್ ಕಾಮತ್ ಎಂಬವರ ಮೂಲಕ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿದ್ದಾರೆ. ತಕ್ಷಣ ಸ್ಪಂದಿಸಿದ ಸಚಿವೆ ವಿದೇಶಾಂಗ ಸಚಿವಾಲಯದ ಮೂಲಕ ಸಮಸ್ಯೆಯನ್ನು ಕೇವಲ ಇಪ್ಪತ್ತು ನಿಮಿಷಗಳಲ್ಲಿ ಬಗೆಹರಿಸಿದ್ದಾರೆ. ನಂತರ ವಿಮಾನ 20 ನಿಮಿಷ ತಡವಾಗಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಮಂಗಳೂರಿಗೆ ಹಾರಾಟ ನಡೆಸಿದೆ.