ನವದೆಹಲಿ: ಭಾರತದ ಸಂಪ್ರದಾಯಿಕ ವೈರಿ ಪಾಕಿಸ್ಥಾನಕ್ಕೆ ದೇಶದ ರಕ್ಷಣೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದ ಆರೋಪದಲ್ಲಿ ಯೋಧ ಸೇರಿದಂತೆ ಇಬ್ಬರನ್ನು ಬಂಡಿಸಲಾಗಿದೆ.
ಭಾರತದ ಭದ್ರತೆಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಪಾಕಿಸ್ತಾನದ ಗುಪ್ತಚರ ಇಲಾಖೆ ಕೈಸೇರುತ್ತಿದ್ದವು. ಈ ಹಿನ್ನಲೆಯಲ್ಲಿ ರಾಜಸ್ಥಾನದ ಪೋಖ್ರಾನ್ ಆರ್ಮಿ ಬೇಸ್ ಕ್ಯಾಂಪ್ ಗೆ ತರಕಾರಿ ಸರಬರಾಜು ಮಾಡುತ್ತಿದ್ದ ಹಬೀಬುಲ್ ರೆಹಮಾನ್ ಎಂಬಾತನನ್ನು ಬಂದಿಸಲಾಗಿತ್ತು. ಬಳಿಕ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಆತ ತರಕಾರಿ ಸರಬರಾಜು ಮಾಡುತ್ತಿದ್ದ ಸಂದರ್ಭ ಯೋಧರೊಬ್ಬರಿಂದ ಸೂಕ್ಷ್ಮ ದಾಖಲೆಗಳನ್ನು ಪಡೆದು ಪಾಕ್ ನ ಐಎಸ್‌ಐಗೆ ತಲುಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಈ ಹಿನ್ನಲೆಯಲ್ಲಿ ಯೋಧ ಪರಮ್ ಜಿತ್ ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಯೋಧ ಪರಮ್ ಜಿತ್ ಹಣಕ್ಕಾಗಿ ದಾಖಲೆಗಳನ್ನು ಹಬೀಬ್ ಗೆ ನೀಡುತ್ತಿದ್ದರು ಮತ್ತು ಅದನ್ನು ಆತ ರಹಸ್ಯ ಜಾಲಗಳ ಮೂಲಕ ಐಎಸ್ಐ ಗೆ ತಲುಪಿಸುತ್ತಿದ್ದ ಎನ್ನಲಾಗಿದೆ. ಹಬೀಬ್ ಮನೆಗೂ ದಾಳಿ ನಡೆಸಲಾಗಿದ್ದು ಕೆಲವು ರಹಸ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಹಿಂದೆ ಬೃಹತ್ ಜಾಲದ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ.