ಡರ್ಬನ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೋಕೋಬ್ ಜೂಮಾ ಬಂಧನದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸುಮಾರು 250ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹಿಂಸಾಚಾರಿಗಳು ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದು 70ಕ್ಕೂ ಹೆಚ್ಚು ಭಾರತೀಯ ಮೂಲದವರನ್ನು ಕೊಲ್ಲಲಾಗಿದೆ.
ಮಾಜಿ ಅಧ್ಯಕ್ಷ ಜೋಕೋಬ್ ಜೂಮಾ ಅವರು ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಜನಾಂಗೀಯ ನಿಂದನೆ ಆರೋಪ ಎದುರಿಸುತ್ತಿದ್ದು ಕಳೆದವಾರ ಬಂಧನವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಹಿಂಸಾಚಾರ ಭುಗಿಲೆದ್ದಿದ್ದು ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ಆಕ್ರೋಶಿತ ಜನರು ಅಂಗಡಿ ಮುಂಗಟ್ಟುಗಳನ್ನು ಒಡೆದು ಹಾಕುತ್ತಿದ್ದು ಸರಕು-ಸಾಮಗ್ರಿಗಳನ್ನು ನಾಶ ಮಾಡುತ್ತಿದ್ದಾರೆ. ಸಿಕ್ಕ ಸಿಕ್ಕವರನ್ನು ಹೊಡೆದು – ಕಡಿದು ಕೊಲ್ಲುತ್ತಿದ್ದಾರೆ. ವಾಹನಗಳಿಗೆ ಮತ್ತು ಸಿಕ್ಕ ಸಿಕ್ಕ ಬೆಲೆಬಾಳುವ ವಸ್ತುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ.
ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಪ್ರಜೆಗಳಿಗೆ ಹಿಂಸಾಚಾರಿಗಳು ಎಲ್ಲಿಲ್ಲದ ಕಾಟ ಕೊಡುತ್ತಿದ್ದಾರೆ. ಭಾರತೀಯ ಮೂಲದ ವ್ಯಾಪಾರಸ್ಥರ ಅಂಗಡಿ ಮನೆಗಳನ್ನು ಉದ್ದೇಶಪೂರ್ವಕವಾಗಿ ನಾಶ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಭಾರೀ ಆತಂಕ ಎದುರಾಗಿದೆ.
ಮೊದಲೇ ದಕ್ಷಿಣ ಆಫ್ರಿಕಾ ದೇಶ ಕೊರೋನಾ ಕಾರಣದಿಂದ ಸಂಕಷ್ಟದಲ್ಲಿತ್ತು. ಈ ನಡುವೆ ಹಿಂಸಾಚಾರ ನಡೆಯುತ್ತಿರುವುದು ದೇಶದ ಪ್ರಜೆಗಳನ್ನು ಇನ್ನಷ್ಟು ಕುಗ್ಗಿಸಿದೆ. ಇತ್ತ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವಿರಕ್ಕೂ ಹೆಚ್ಚು ಸೊಂಕಿತರು ಸಾವನ್ನಪ್ಪಿದ್ದಾರೆ. ಭದ್ರತಾ ಪದೆಗಳು ಮತ್ತು ಪೊಲೀಸರು ಹಿಂಸಾಚಾರ ನಿಯಂತ್ರಣಕ್ಕೆ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಅದಾಗಿಯೂ ಹಿಂಸಾಚಾರಿಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದೆ.