ಚಿಕ್ಕಬಳ್ಳಾಪುರ: ಶನಿವಾರ ಮತ್ತು ಭಾನುವಾರ ನಂದಿಬೆಟ್ಟವನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು, ಪ್ರವಾಸಿಗರೇ ನಂದಿಬೆಟ್ಟಕ್ಕೆ ಬರಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಲತಾ ಅವರು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಶನಿವಾರ ಹಾಗೂ ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿಸುತ್ತಾರೆ. ಇದರಿಂದ ಕೊರೊನಾ ನಿಯಮಗಳನ್ನು ಉಲ್ಲಂಘನೆ ಅಲ್ಲದೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಾಗಿದೆ. ಕಳೆದ ಭಾನುವಾರ 12,000 ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗಿದ್ದು, ಪ್ರವಾಸಿಗರ ದಟ್ಟಣೆ ಹೆಚ್ಚಾಗಿ ಕೊರೊನಾ ನಿಯಮಗಳನ್ನು ಪ್ರವಾಸಿಗರು ಗಾಳಿಗೆ ತೂರಿದ್ದರು.

ಹೀಗಾಗಿ ಪ್ರವಾಸಿಗರೇ ವಿಕೇಂಡ್ ಶನಿವಾರ-ಭಾನುವಾರ ನಂದಿಬೆಟ್ಟದತ್ತ ಬಂದು ಬೇಜಾರು ಮಾಡಿಕೊಂಡು ವಾಪಾಸ್ ಹೋಗಬೇಡಿ. ವಾರದ ಇತರ ದಿನಗಳಲ್ಲೂ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದೆ. ಆದರೆ ನಂದಿಬೆಟ್ಟದ ಮೇಲ್ಭಾಗದಲ್ಲಿ 550 ಬೈಕ್ ಹಾಗೂ 320 ಕಾರುಗಳಿಗಷ್ಟೇ ಪಾರ್ಕಿಂಗ್ ಸೌಲಭ್ಯವಿದ್ದು, ಇಷ್ಟು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.
ನಂದಿಬೆಟ್ಟದ ತಪ್ಪಲಿನ ಕೆಳಭಾಗದ ಚೆಕ್ ಪೋಸ್ಟ್ ನಲ್ಲೇ ಟೋಕನ್ ವಿತರಣೆ ಮಾಡಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಲಾಗುವುದು. ಟೋಕನ್ ವಿತರಣೆ ಮಾಡಿ ವಾಹನಗಳ ದಟ್ಟಣೆ ಹಾಗೂ ಜನದಟ್ಟಣೆ ತಡೆಯುವ ಮೂಲಕ ಕೊರೊನಾ ಮೂರನೇ ಅಲೆ ತಡೆಯಲಾಗುವುದು. ಜೊತೆಗೆ ಈ ಟೋಕನ್ ವಿತರಣೆಯನ್ನು ಮುಂದಿನ ದಿನಗಳಲ್ಲಿ ಆನ್‌ಲೈನ್ ಮೂಲಕ ತಂತ್ರಜ್ಞಾನ ಬಳಸಿಕೊಂಡು ಟೋಕನ್ ನೀಡುವ ಕಾರ್ಯಕ್ಕೆ ಕೆಎಸ್‌ಟಿಡಿಸಿ ಆಪ್ ತಯಾರಿ ಮಾಡಲಿದೆ. ಮತ್ತೊಂದೆಡೆ ಬೆಟ್ಟದ ಕೆಳಭಾಗದಲ್ಲಿ ಪಾರ್ಕಿಂಗ್ ಗೆ 7 ಎಕರೆ ಜಾಗ ಮೀಸಲಿಟ್ಟಿದ್ದು, ಅದಷ್ಟು ಬೇಗ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.