ಸುಳ್ಯ: ಹೆಸರು ತಿರುಮಲೇಶ್ವರ ಭಟ್. ಇವರ ಮನೆಯ ಗೇಟಿನ ಒಳಹೊಕ್ಕರೆ ಸಾಕು ಮೈಮನ ಅರಳುತ್ತದೆ. ಮನಸ್ಸು ರೋಮಾಂಚನಗೊಳ್ಳುತ್ತದೆ. ಇದಕ್ಕೆ ಕಾರಣ ಮನೆಯ ಅಂಗಳದಲ್ಲಿರುವ ಬಣ್ಣ ಬಣ್ಣದ ಹೂಗಿಡ-ಬಳ್ಳಿಗಳ, ಕ್ಯಾಕ್ಟಸ್ ಗಿಡಗಳ ಸುಂದರ ದೃಶ್ಯ.
ಹೌದು ತಿರುಮಲೇಶ್ವರ ಅವರ ಮನೆ ಇರುವುದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕುರಿಯಾಜೆಯಲ್ಲಿ. ವೃತ್ತಿಯಲ್ಲಿ ಕೃಷಿಕರಾಗಿರುವ ಇವರು ಮನೆಯಂಗಳವನ್ನು ಉದ್ಯಾನವನವನ್ನಾಗಿ ಮಾಡಿದ್ದಾರೆ. ಪ್ರಗತಿಪರ ಕೃಷಿಕರಾಗಿರುವ ಕಾರಣ ಇವರು ಆಗಾಗ ಕೃಷಿ ಅಧ್ಯಯನಕ್ಕಾಗಿ ಅಂತರರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರವಾಸ ಮಾಡುತ್ತಾರೆ. ಆ ಸಮಯದಲ್ಲಿ ಅಲ್ಲಲ್ಲಿ ಸಿಕ್ಕ ಹಲವಾರು ಹೂಗಿಡಗಳು, ಕ್ಯಾಕ್ಟಸ್ ಗಿಡಗಳು ಹಣ್ಣುಹಂಪಲ ಗಿಡಗಳು ಇತ್ಯಾದಿಗಳನ್ನು ತನ್ನ ಮನೆಯಂಗಳ ಮತ್ತು ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ಹೀಗೆ ತಂದು ನೆಟ್ಟು ಬೆಳೆಸಿದ ಹೂ ಗಿಡಬಳ್ಳಿಗಳು ಇದೀಗ ಸುಂದರ ಉದ್ಯಾನವನವಾಗಿ ಮಾರ್ಪಾಟಾಗಿದೆ. ಅಂದು ಖುಷಿಗಾಗಿ ತಂದು ಸಾಕಿದ ಗಿಡಗಳು ಇಂದು ನೋಡುಗರ ಮನ ಸೂರೆಗೊಳಿಸುತ್ತದೆ.
ತಿರುಮಲೇಶ್ವರ ಭಟ್ ಅವರು ಕೆಲವು ವರ್ಷಗಳ ಹಿಂದೆ ಆಗಾಗ ಅಂತರಾಜ್ಯ ಹಾಗೂ ಮಲೇಷಿಯಾ, ಥಾಯ್ಲಾಂಡ್, ನೇಪಾಳ ಕೃಷಿ ಅಧ್ಯಯನ ಪ್ರವಾಸ ಕೈಗೊಂಡಿದ್ದರು. ಆಗ ಸುಮಾರು 250 ಕ್ಕೂ ಅಧಿಕ ಕ್ಯಾಕ್ಟಸ್ ಗಿಡಗಳನ್ನು ಸಂಗ್ರಹಿಸಿದ್ದಾರೆ. ಹಾಗೆ ಸಂಗ್ರಹಿಸಿ ತಂದ ಗಿಡಗಳು ಅಂಗಳದ ಸೌಂದರ್ಯವನ್ನು ಹೆಚ್ಚಿಸುತ್ತಾ ಹೋಗಿದೆ. ಇದರ ಹಿಂದೆ ಅವರು ಅವಿರತ ಶ್ರಮ ವಹಿಸಿದ್ದಾರೆ. ನಂತರ ಆಕರ್ಷಕ ಗಾರ್ಡನ್ ಸ್ವರೂಪ ಪಡೆದಿದೆ. ಇಂದು ಈ ಸೌಂದರ್ಯ ಸವಿಯಲೆಂದೇ ಊರ ಪರವೂರ ಜನರು ಇವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಇದಲ್ಲದೆ ತೋಟದ ತುಂಬೆಲ್ಲ ಸುಮಾರು ಇನ್ನೂರಕ್ಕೂ ಹೆಚ್ಚು ತಳಿಯ ಹಣ್ಣುಹಂಪಲುಗಳ ಗಿಡವನ್ನು ನೆಟ್ಟು ಬೆಳೆಸಿದ್ದಾರೆ. ಇದರ ಹಿಂದೆ ಅವರಿಗೆ ಯಾವುದೇ ವಾಣಿಜ್ಯ ಉದ್ದೇಶವಿಲ್ಲ. ಬದಲಾಗಿ ಮನೆಯ ಉಪಯೋಗಕ್ಕಾಗಿ ಬಳಸುತ್ತಿದ್ದಾರೆ. ಮತ್ತು ಅವರು ಇದ್ಯಾವುದನ್ನು ಯೋಜನಾಬದ್ಧವಾಗಿ ಬೆಳೆಸಿಲ್ಲ ಬದಲಾಗಿ ಖುಷಿಗೋಸ್ಕರ ನೆಟ್ಟು ಸಾಕಿದ್ದಾರೆ.
ಇನ್ನು ತನ್ನ ಎಂಟು ಎಕರೆ ತೋಟದಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಬೆಳೆಯುವ ಭಟ್ಟರು ದೇಶಿ ತಳಿಯ ಹಲವಾರು ದನಗಳನ್ನು ಸಾಕಿದ್ದಾರೆ. ಗ್ರಾಮೀಣ ಭಾಗದ ಪ್ರಗತಿಪರ ಕೃಷಿಕರಾಗಿರುವ ಇವರಿಗೆ ಅನೇಕ ಕೃಷಿ ಪ್ರಶಸ್ತಿಗಳು ಸಂದಿವೆ.