ಬೆಂಗಳೂರು: ಇಂಗ್ಲೀಷ್, ಸ್ಪಾನಿಷ್ ಸೇರಿದಂತೆ ಹಲವು ಭಾಷೆಗಳನ್ನು ಕಲಿತು ಮೈಸೂರು ರಾಜವಂಶಸ್ಥರ ಹೆಸರಿನಲ್ಲಿ ವ್ಯಕ್ತಿಯೋರ್ವ ಹಲವು ಯುವತಿಯರಿಗೆ ವಂಚನೆ ಎಸಗಿದ ಪ್ರಕರಣ ಪಿರಿಯಾಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ಮುತ್ತು ಎಂದು ಗುರುತಿಸಲಾಗಿದೆ. ಅದರೆ ಈತ ವಂಚೆನೆ ಕೃತ್ಯ ಎಸಗಲು ಸಿದ್ದಾರ್ಥ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಸಿದ್ದಾರ್ಥ ಎಂಬ ಹೆಸರಿನ ಮುತ್ತು ಯುವತಿಯರನ್ನು ಪ್ರೀತಿಯ ಬಲೆಗೆ ತಳ್ಳಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ ಅಲ್ಲದೆ ಸಮಯ ಕಳೆದಂತೆ ಹಣ ಪಡೆದು ವಂಚನೆ ಎಸಗಿರುವುದಾಗಿ ಈತನ ವಿರುದ್ಧ ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಯುವತಿಯೋರ್ವಳು ದೂರು ನೀಡಿದ್ದಳು.
ಅದಲ್ಲದೆ ಮೂವರು ಯುವತಿಯರ ಬಳಿ ವೈಯಕ್ತಿಕ ಸಹಾಯ ಬೇಕೆಂದು ಒಟ್ಟ 40 ಲಕ್ಷ ಹಣವನ್ನು ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಯುವತಿಯರಿಂದ ಹಣ ಹಾಕಿಸಿಕೊಂಡ ಅಕೌಂಟ್ ನಂಬರ್ ಪಡೆದು ಹೋದಾಗ ಪಿರಿಯಾಪಟ್ಟಣದಲ್ಲಿ ಆರೋಪಿಯ ಮಾಹಿತಿ ಸಿಕ್ಕಿತ್ತು. ಆರೋಪಿ ಯುಎಸ್ ಇಂಗ್ಲಿಷ್, ಸ್ಪಾನಿಷ್, ಮಳಯಾಳಂ ಮತ್ತು ಕನ್ನಡ ಭಾಷೆಗಳನ್ನು ಮಾತಾಡುತ್ತಾನೆ. ಈ ಬಗ್ಗೆ ತನಿಖೆ ಮುಂದುವರೆಸಿದಾಗ ಪಿರಿಯಾಪಟ್ಟದಲ್ಲಿ ಪ್ರವಾಸಿಗಳಾಗಿ ಬರುವವರ ಬಳಿ ಭಾಷೆ ಕಲಿತಿದ್ದಲ್ಲದೆ ಯೂಟ್ಯೂಬ್ ನೋಡಿ ವಂಚನೆ ನಡೆಸುವುದನ್ನು ಕಲಿತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಲುಕುಪ್ಪೆಯಲ್ಲಿ ಕೂಲಿ ಕೆಲಸ ಮಾಡುವರಿಗೆ 2-3 ಸಾವಿರ ಹಣ ಕೊಟ್ಟು ಅವರ ಅಕೌಂಟ್ ಪಡೆದು ಆರ್‌ಟಿಜಿಎಸ್ ಮಾಡುತ್ತಿದ್ದ.
ಐಷಾರಾಮಿ ಜೀವನ ಮಾಡ್ತಿದ್ದು, ಗ್ಯಾಂಬ್ಲಿಂಗ್ ಮಾಡುತ್ತಿದ್ದ. ಯೂಟ್ಯೂಬ್‌ನಲ್ಲಿ ಕೆಲ ವಿಡಿಯೋ ನೋಡಿ ಪ್ರೇರೇಪಿತನಾಗಿ ವಂಚನೆ ಮಾಡಲು ಮುಂದಾದೆ ಅಂತ ಹೇಳಿದ್ದಾನೆ. ಎರಡು ವರ್ಷದಿಂದ ಈ ಕೆಲಸ ಮಾಡುತ್ತಿರುವುದಾಗಿ ಆತ ತಿಳಿಸಿದ್ದಾನೆ. ಏಳನೇ ತರಗತಿ ಮುಗಿಸಿ, ಆ ಬಳಿಕ ಶಾಲೆಗೆ ಹೋಗಿರಲಿಲ್ಲ. ಆರೋಪಿಗೆ ಸಹಾಯ ಮಾಡುತ್ತಿದ್ದ ಇನ್ನೋರ್ವನ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.