ಉಡುಪಿ: ಜಿಲ್ಲೆಯ ಬ್ರಹ್ಮಾವರದ ಫ್ಲಾಟ್ ಒಂದರಲ್ಲಿ ಕೆಲ ದಿನಗಳ ಹಿಂದೆ ವಿದೇಶದಿಂದ ವಾಪಾಸಾಗಿದ್ದ ಮಹಿಳೆಯನ್ನು ಕತ್ತುಹಿಸುಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಂಗೊಳ್ಳಿ ಮೂಲದ ವಿಶಾಲ (35 ವ.) ಕೊಲೆಯಾದ ಮಹಿಳೆ. ಕೆಲವು ದಿನಗಳ ಹಿಂದೆಯಷ್ಟೇ ವಿದೇಶದಿಂದ ಆಗಮಿಸಿದ್ದ ವಿಶಾಲ, ನಗರದಲ್ಲಿ ಕೆಲವು ಅಗತ್ಯ ಕೆಲಸಗಳಿರುವ ಕಾರಣ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಕೊಲೆಯಾದ ದಿನ ಸಂಜೆ ವೇಳೆಗೆ ಮನೆಗೆ ಬರುವುದಾಗಿ ಹೇಳಿದ್ದರು. ಆದರೆ, ವಿಶಾಲ ಸಂಜೆಯಾದರೂ ಮನೆಗೆ ಬಾರದ ಕಾರಣ ಅವರ ತಂದೆ ಹುಡುಕಿಕೊಂಡು ನಗರಕ್ಕೆ ಬಂದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.ವಿಶಾಲ ಅವರು ಇತ್ತೀಚೆಗೆ ವಿದೇಶದಿಂದ ಬಂದಿದ್ದ ಕಾರಣ, ಹಣ, ಚಿನ್ನದ ಆಸೆಗೆ ಕೊಲೆ ನಡೆದಿದೆ ಎನ್ನಲಾಗಿದೆ. ಕೊಲೆ ಮಾಡಿದ ನಂತರ ದುಷ್ಕರ್ಮಿಗಳು ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿರುವ ಶಂಕೆ ವ್ಯಕ್ತವಾಗಿದೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರಕರಣ ಸಂಬಂಧ ಆಕೆ ಸಂಚರಿಸಿದ್ದ ರಿಕ್ಷಾ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಬಳಿಕ ಕೊಲೆಗೆ ನಿಜ ಕಾರಣ ತಿಳಿದು ಬರಲಿದೆ.
ಬ್ರಹ್ಮಾವರ: ಫ್ಲಾಟ್’ನಲ್ಲಿ ವಿದೇಶದಿಂದ ಬಂದ ಮಹಿಳೆಯ ಉಸಿರುಗಟ್ಟಿಸಿ ಕೊಲೆ
