ಜೈಪುರ: ರಾಜಸ್ಥಾನದಲ್ಲಿ ಭಾನುವಾರ ಸಿಡಿಲಿನ ಹೊಡೆತಕ್ಕೆ ಸಿಲುಕಿ ಸುಮಾರು 20 ಜನ ಸಾವಿಗೀಡಾದ್ದಾರೆ. ರಾಜ್ಯದ ಜೈಪುರ, ಝಲವಾರ್, ಧೋಲ್‌ಪುರ ಜಿಲ್ಲೆಗಳಲ್ಲಿ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಸುಮಾರು 20 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 20 ಸಾವಿನ ಪೈಕಿ ಜೈಪುರದ ಹೊರವಲಯದಲ್ಲಿರುವ ಅಮೆರ್ ಕೋಟೆ (Amer Fort) ವೀಕ್ಷಣೆಗಾಗಿ ಸಂಜೆ ವೇಳೆ ಪ್ರವಾಸಿಗರು ಬಂದಿದ್ದಾಗ ವೇಳೆ ಸಂಭವಿಸಿದೆ ಎನ್ನಲಾಗಿದೆ. ಅಮೆರ್ ಕೋಟೆಯ ವೀಕ್ಷಣಾಗೋಪುರದ ಬಳಿ ನಿಂತು ಪ್ರಕೃತಿ ವೀಕ್ಷಣೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಸಿಡಿಲು ಬಡಿದಿದ್ದು, ಸ್ಥಳದಲ್ಲಿಯೇ ಅನೇಕರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮೃತಪಟ್ಟ ದುರ್ದೈವಿಗಳ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಸಿಡಿಲು ತಗುಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಹಣವನ್ನು ಪರಿಹಾರದ ರೂಪದಲ್ಲಿ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ