ಮಂಗಳೂರು: ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಗರ ಹೊರವಲಯದ ಉಚ್ಚಿಲ ಎಂಬಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರು ತಲಪಾಡಿ ನಡುವೆ ಸಂಚರಿಸುತ್ತಿದ್ದ ಸಿಟಿ ಬಸ್ ಚಾಲಕ ಹೆದ್ದಾರಿಯಲ್ಲಿ ಒಮ್ಮೆಗೆ ಬಸ್ಸನ್ನು ನಿಲ್ಲಿಸಿದ್ದಾನೆ. ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿ ಯಿಂದ ಸಂಪೂರ್ಣವಾಗಿ ಒಳಗೆ ನುಗ್ಗಿದೆ. ಬೈಕ್ ಸವಾರರಾದ, ಆಂಧ್ರ ಮೂಲದ ಶಶಿಧರ್ ರೆಡ್ಡಿ (27) ಗಂಭೀರ ಗಾಯಗೊಂಡಿದ್ದಾರೆ. ಸಹಸವಾರ ಶಾನು ಭಾಝ್ (31) ಎಂಬವರು ಗಾಯಗೊಂಡು ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ತಲಪಾಡಿ ಟೋಲ್ ಪ್ಲಾಝಾದ ಸಿಬ್ಬಂದಿಗಳಾಗಿದ್ದು ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಧಾರಾಕಾರ ಮಳೆ ಬರುತ್ತಿದ್ದ ಕಾರಣ ಬಸ್ ಚಾಲಕ ಬ್ರೇಕ್ ಹಾಕಿರುವುದು ಬೈಕ್ ಸವಾರನ ಗಮನಕ್ಕೆ ಬರಲಿಲ್ಲ. ಹೆದ್ದಾರಿಯಲ್ಲಿ ಅವೈಜ್ಞಾನಿಕ ಬಸ್ ನಿಲುಗಡೆ ಸ್ಥಳಗಳಿದ್ದು, ಈ ಹಿಂದೆಯೂ ಈ ತರಹದ ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.