ಮಂಗಳೂರು: ವಿದ್ಯಾರ್ಥಿನಿಯಿಂದ ಲಂಚ ಸ್ವೀಕಾರರಿಸಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ರವಿಶಂಕರ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
2012ರ ಡಿಸೆಂಬರ್ 4ರಂದು ಡಾ.ಅನಿತಾ ರವಿಶಂಕರ್ ಅವರು ಪಿಎಚ್‌ಡಿ ವಿದ್ಯಾರ್ಥಿನಿ ಪ್ರೇಮಾ ಡಿ’ಸೋಜಾ ಅವರಿಂದ ಪ್ರಬಂಧ ಅಂಗೀಕಾರ ಆಗಬೇಕಾದರೆ ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರ ಖರ್ಚಿಗೆಂದು 16,800 ರೂ.ಗಳನ್ನು ಲಂಚವಾಗಿ ಬೇಡಿಕೆ ಇಟ್ಟಿದ್ದರು.
ಇದರ ಮುಂಗಡ ಹಣ ವಾಗಿ 5000 ರೂ. ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ ಉಮೇಶ್ ಜಿ. ಶೇಟ್ ಮತ್ತು ಸಿಬ್ಬಂದಿ ದಾಳಿ ಮಾಡಿ ಪ್ರಸ್ತುತ ಕೊಣಾಜೆ ಮಂಗಳೂರು ಯುನಿವರ್ಸಿಟಿಯ ಸಮಾಜ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಆಗಿರುವ ಡಾ. ಅನಿತಾ ರವಿಶಂಕರ್ ರವರನ್ನು ಬಂಧಿಸಿದ್ದರು. ಅನಿತಾ ಆರಂಭದಲ್ಲಿ 10,000 ರೂ, 4,000 ಬಳಿಕ 16,800 ರೂ.ಗಳನ್ನು ಬೇಡಿಕೆ ಇಟ್ಟಿದ್ದರು ಎಂದು ದೂರುದಾರರು ಆರೋಪಿಸಿದ್ದರು.
ಲೋಕಾಯುಕ್ತ ಪರವಾಗಿ ನ್ಯಾಯಾಲಯವು ಒಂಬತ್ತು ಸಾಕ್ಷಿಗಳನ್ನು ವಿಚಾರಣೆಗೆ ಒಳ ಪಡಿಸಲಾಗಿತ್ತು . ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಆರೋಪಿಗೆ ಎರಡು ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ 15 ಸಾವಿರ ರೂ.ಗಳ ದಂಡ ಮತ್ತು ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 3 ವರ್ಷ ಸಾದಾ ಸಜೆ ಮತ್ತು 15 ಸಾವಿರ ರೂ. ದಂಡ. ಆರೋಪಿ ದಂಡ ಪಾವತಿಸಲು ವಿಫಲವಾದರೆ ತಲಾ ಒಂದು ತಿಂಗಳುಗಳ ಸಾದಾ ಸಜೆ ಅನುಭವಿಸಬೇಕೆಂದು ಜು.೦೯ ರಂದು ನ್ಯಾಯಾಲಯ ಆದೇಶಿಸಿದೆ. ಎರಡೂ ಅಪರಾಧಕ್ಕೆ ಸಂಬಂದಿಸಿದ ಶಿಕ್ಷೆಗಳನ್ನು ಅಪರಾಧಿ ಜೊತೆಯಾಗಿ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಉಮೇಶ್ ಜಿ. ಶೇಟ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.