ಸುಬ್ರಹ್ಮಣ್ಯ: ರಾಜ್ಯ ಸರಕಾರಕ್ಕೆ ಬಹುಕೋಟಿ ಆದಾಯ ತಂದುಕೊಡುವ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಸೇವಾ ಕೌಂಟರ್ ತೆರೆಯಲು ನಿರ್ಧರಿಸಲಾಗಿದೆ. ಇನ್ನು ಈ ಕಂಟ್ರಾಕ್ಟ್’ನ್ನು ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು ಖಾಸಗಿ HDFC ಬ್ಯಾಂಕ್ ಗೆ ನೀಡಿರುವುದು ಭಕ್ತರಲ್ಲಿ ಅನುಮಾನ ಹುಟ್ಟುಹಾಕಿದೆ.
ಧಾರ್ಮಿಕ ಮತ್ತು ದತ್ತಿ ಇಲಾಖೆ ದೇವಾಲಯದ ಸೇವೆಗಳಲ್ಲಿ ಪಾದರ್ಶಕತೆ ಗಟ್ಟಿಗೊಳಿಸಲು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈ ಮೂಲಕ ಭಕ್ತರು ಮಾಡಿಸುವ ಸೇವೆಯ ಹಣ ತಕ್ಷಣ ನೇರವಾಗಿ ದೇವಾಲಯದ ಖಾತೆಗೆ ಜಮೆಯಾಗಲಿದೆ. ಕುಕ್ಕೆ ದೇವಾಲಯ ಸೇರಿದಂತೆ, ಘಾಟಿ ಸುಬ್ರಹ್ಮಣ್ಯ ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ಈ ವ್ಯವಸ್ಥೆ ಜಾರಿಗೆ ಚಿಂತಿಸಲಾಗಿದೆ. ಜೊತೆಗೆ ಆನ್ಲೈನ್ ಮೂಲಕ ಮುಂಗಡವಾಗಿ ಸೇವಾ ರಶೀದಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಎಲ್ಲಾ ಶ್ರೀಮಂತ ದೇವಾಲಯಗಳ ಹಣಕಾಸು ವ್ಯವಹಾರವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕವೇ ನಿರ್ವಹಿಸಲಾಗುತ್ತಿತ್ತು. ಆದರೆ ಸೇವಾ ಕೌಂಟರ್ ವ್ಯವಸ್ಥೆಯನ್ನು ಖಾಸಗಿ ಎಚ್ಡಿಎಫ್ಸಿ ಬ್ಯಾಂಕ್ ನಿರ್ವಹಣೆಗೆ ನೀಡಿರುವುದು ಭಕ್ತರಲ್ಲಿ ಅನುಮಾನ ಮೂಡಿಸಿದೆ. ದೇವಸ್ಥಾನಗಳ ಸಂಪೂರ್ಣ ನಿರ್ವಹಣೆಯನ್ನು ಖಾಸಗಿಕರಣಗೊಳಿಸುವ ಹುನ್ನಾರದ ಮೊದಲ ಸೂಚನೆ ಇದಾಗಿದೆ ಎನ್ನುವ ಚರ್ಚೆಗಳು ನಡೆಯುತ್ತಿದೆ.