ಬೆಂಗಳೂರು: ಕೋವಿಡ್ ಕಾರಣದಿಂದ ಮುಂದೂಡಲಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಸದ್ಯದಲ್ಲೇ ನಡೆಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ರಾಜ್ಯದ್ಯಂತ ಹೆಚ್ಚಿನ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿತ್ತು. ಆ ಸಮಯದಲ್ಲಿ ರಾಜ್ಯದ್ಯಂತ ಲಾಕ್ಡೌನ್ ಘೋಷಣೆಯಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಬಳಿಕ ಎಲ್ಲ ವಿಶ್ವವಿದ್ಯಾನಿಲಯಗಳು ಆನ್ಲೈನ್ ಮೂಲಕ ಮುಂದಿನ ಸೆಮಿಸ್ಟರ್ ನ ತರಗತಿಗಳನ್ನು ಆರಂಭಿಸಿವೆ. ಈ ಕಾರಣದಿಂದ ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತವೆಯೇ ಇಲ್ಲವೇ ಎಂದು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು. ತರಗತಿಗಳು ನಡೆದು ಕೆಲವು ತಿಂಗಳುಗಳು ಕಳೆದಿರುವುದರಿಂದ, ಪರೀಕ್ಷೆ ರದ್ದುಗೊಳಿಸುವಂತೆ ವಿದ್ಯಾರ್ಥಿ ವಲಯದಿಂದ ಒತ್ತಡವು ಕೇಳಿಬಂದಿತ್ತು.
ಇದೀಗ ಎಲ್ಲ ಗೊಂದಲಗಳಿಗೆ ರಾಜ್ಯ ಉನ್ನತ ಶಿಕ್ಷಣ ಸಚಿವಾಲಯ ತೆರೆ ಎಳೆದಿದ್ದು ಸದ್ಯದಲ್ಲೇ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದೆ. ರಾಜ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ. ಸದ್ಯದಲ್ಲೇ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. ಯಾವುದೇ ಕಾರಣಕ್ಕೂ ಪರೀಕ್ಷೆಗಳನ್ನು ರದ್ದುಗೊಳಿಸುವುದು ಇಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.