Ad Widget .

ಕೊಡಗಿನಲ್ಲಿ ಜು.19ರವರೆಗೆ ಲಾಕ್ ಡೌನ್ ಕಂಟಿನ್ಯೂ, ಸೀಮಿತ ಸೇವೆಗಳಿಗಷ್ಟೇ ಅವಕಾಶ, ಪ್ರವಾಸಿಗರಿಗೆ‌ ನಿಷೇಧ

ಕೊಡಗು ವರದಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ರೇಟ್ ಕಡಿಮೆಯಾಗದ ಹಿನ್ನೆಲೆ ಕೆಲವು ಸಡಿಲಿಕೆಯೊಂದಿಗೆ ಲಾಕ್‌ಡೌನ್ ಜು19ರವರೆಗೆ ಮುಂದುವರೆಸಲಾಗಿದೆ.
ಈ ಹಿಂದೆ ವಾರದ ಮೂರು ದಿನ ಬೆಳಿಗ್ಗೆ 6ರಿಂದ 1ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಸಡಿಲಿಕೆ ಆದೇಶದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ರಿಂದ 2 ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಕಂಟೈನ್ಮೇಂಟ್ ವಲಯದಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಅತ್ಯವಶ್ಯಕ ಸೇವೆಗಳಡಿ ಬರುವ ತರಕಾರಿ, ಹಣ್ಣು-ಹಂಪಲು, ದಿನಸಿ, ಕೃಷಿಗೆ ಸಂಬಂಧಿಸಿದ ಅಂಗಡಿ ಮಳಿಗೆ ಮತ್ತು ದಾಸ್ತಾನು ಕೇಂದ್ರಗಳು, ಮೀನು ಮತ್ತು ಮಾಂಸದ ಮಳಿಗೆ, ಹಾಪ್ ಕಾಮ್ಸ್ ಮಳಿಗೆಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.
ಹೋಟೆಲ್, ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಪಾರ್ಸಲ್ ರೂಪದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪಡೆಯಲು ಅನುಮತಿಸಿದೆ. ಹಾಗೆಯೇ ಹೋಟೆಲ್, ರೆಸ್ಟೋರೆಂಟ್‌ಗಳಿಂದ ಹೋಮ್ ಡೆಲಿವರಿ ನೀಡಲು ಬೆಳಿಗ್ಗೆ 6 ರಿಂದ ಸಂಜೆ 8ರವರೆಗೆ ಅನುಮತಿಸಿದೆ.
ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್ ಪೋಸ್ಟ್‌ಗಳಲ್ಲಿ ವಿಚಾರಣೆ ನಡೆಸಿ, ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುವುದು. ಹೊರ ಜಿಲ್ಲೆಯಿಂದ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ.
ಸರ್ಕಾರದ ಇತ್ತೀಚಿನ ಸುತ್ತೋಲೆಯಂತೆ ನೆರೆಯ ಕೇರಳ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ 72 ಗಂಟೆಗಳ ಅವಧಿಯೊಳಗಿನ ಕೋವಿಡ್ ನೆಗೆಟಿವ್ ವರದಿ (ಆರ್.ಟಿ.ಪಿ.ಸಿ.ಆರ್) ಹೊಂದಿರುವುದು ಕಡ್ಡಾಯವಾಗಿದೆ. ರಾಜ್ಯ ಸರ್ಕಾರದ ಮತ್ತು ಅದರ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಇತ್ಯಾದಿಗಳ ಅಧಿಕಾರಿ, ಸಿಬ್ಬಂದಿಗಳ ಕರ್ತವ್ಯದ ನಿಮಿತ್ತ ಹಾಗೂ ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿ, ನೌಕರರ ಸಂಚಾರಕ್ಕೆ ಅವಕಾಶ ಇರುತ್ತದೆ. ಆದರೂ, ಆಯಾ ಕಚೇರಿಯಿಂದ ನೀಡಲ್ಪಟ್ಟ ಅಧಿಕೃತ ಗುರುತಿನ ಚೀಟಿ ಹೊಂದಿರತಕ್ಕದ್ದು ಮತ್ತು ಪರಿಶೀಲನೆ ವೇಳೆ ಹಾಜರುಪಡಿಸಲು ಸೂಚಿಸಲಾಗಿದೆ.
ಪ್ರತಿ ದಿನ ರಾತ್ರಿ 9ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ತರ್ತು ಅತ್ಯವಶ್ಯಕ, ವೈದ್ಯಕೀಯ, ಸರಕುಸಾಗಾಣಿಕೆ ಮತ್ತು ತುರ್ತು ಸೇವೆಗಳ ಹೊರತಾಗಿ ಇತರೇ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Ad Widget . Ad Widget .

ಪಿಂಡ ಪ್ರದಾನಕ್ಕೆ ಅವಕಾಶ: ಕೊಡಗು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಮೃತರ ಅಂತ್ಯಕ್ರಿಯೆ ಸಂಬಂಧಿತ ಪಿಂಡ ಪ್ರದಾನ ಕಾರ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಮಾರ್ಗಸೂಚಿಸಿ ಗಮನದಲ್ಲಿರಿಸಿಕೊಂಡು, ಸಂಬಂಧಪಟ್ಟ ದೇವಾಲಯ ಸಮಿತಿಯಿಂದ ಪೂರ್ವಾನುಮತಿ ಪಡೆದುಕೊಂಡು ಗರಿಷ್ಟ 5 ಜನ ಮೀರದಂತೆ ನಡೆಸಲು ಅನುಮತಿ ನೀಡಲಾಗಿದೆ.

Ad Widget . Ad Widget .

ಪ್ರವಾಸಿಗರಿಗಿಲ್ಲ ಅವಕಾಶ: ಜಿಲ್ಲೆಯಾದ್ಯಂತ ಯಾವುದೇ ವ್ಯಕ್ತಿಗಳು ಸಕಾರಣವಿಲ್ಲದೆ ಅನಗತ್ಯ ಸಂಚರಿಸುವುದು, ತಿರುಗಾಡುವುದು ಕಡ್ಡಾಯವಾಗಿ ನಿಷೇಧಿಸಿದೆ. ಹಾಲಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿಯಂತೆ ಪ್ರವಾಸೋದ್ಯಮ ಚಟುವಟಿಕೆಗೆ ನಿರ್ಬಂಧವಿದ್ದು, ಹೋಂಸ್ಟೇ, ಹೊಟೇಲ್, ಲಾಡ್ಜ್, ರೆಸಾರ್ಟ್‌ಗಳಲ್ಲಿ ಆತಿಥ್ಯ ಸೇವೆ ನಿರ್ಬಂಧಿಸಲಾಗಿದೆ.

Leave a Comment

Your email address will not be published. Required fields are marked *