ಬೆಂಗಳೂರು: ಕೊರೋನ ಹಾವಳಿಯಿಂದ ತತ್ತರಿಸಿದ ಹಾಗೂ ಸಂಕಷ್ಟದಲ್ಲಿ ಸಿಲುಕಿದ ಹಲವರಿಗೆ ತನ್ನ ಚಾರಿಟೇಬಲ್ ಸೊಸೈಟಿಯಿಂದ ಅನೇಕರಿಗೆ ಆಸರೆಯಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್’ರವರು ಇದೀಗ ಮತ್ತೊಂದು ಒಳ್ಳೆಯ ಕೆಲಸಕ್ಕೆ ಮುಂದಾಗಿದ್ದಾರೆ.
ದೊಡ್ಡಬಳ್ಳಾಪುರದ ಕಮಲಮ್ಮಾ (70) ಹಾಗೂ ಶ್ರೀನಿವಾಸ (78 ) ಎಂಬ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಮಗನಿಗೆ ಕಾಲಿಲ್ಲದ ಕಾರಣ ಆತನಿಗೆ ಪೋಷಕರನ್ನು ನೋಡಿಕೊಳ್ಳಲಾಗುತ್ತಿಲ್ಲ. ಇನ್ನೋರ್ವ ಮಗ ಮೈಸೂರಿನಲ್ಲಿ ವಾಸವಿದ್ದು ,ಅಪ್ಪ ಅಮ್ಮನಿಗೆ ಎಳ್ಳು ನೀರು ಬಿಟ್ಟು ಕೈ ತೊಳೆದುಕೊಂಡಿದ್ದಾನೆ.
ಬೆಂಗಳೂರಿನಲ್ಲಿ ಇದ್ದ ಆಸ್ತಿಯನ್ನೆಲ್ಲಾ ಮಾರಿ ದೊಡ್ಡಬಳ್ಳಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಈ ದಂಪತಿಗಳ ವಿಚಾರ ತಿಳಿದ ಕೂಡಲೇ ಕಿಚ್ಚ ಸುದೀಪ್ ರವರು ‘ಸುದೀಪ್ ಚಾರಿಟೇಬಲ್ ಸೊಸೈಟಿ’ಯ ಹುಡುಗರನ್ನು ಕಳುಹಿಸಿಕೊಟ್ಟಿದ್ದಾರೆ.
ಮಕ್ಕಳಿದ್ದರೂ ಇಲ್ಲದಂತೆ ಬದುಕುತ್ತಿರುವ ಈ ವೃದ್ಧ ದಂಪತಿಗೆ ಕರುನಾಡಿನ ಮಾಣಿಕ್ಯ ಕಿಚ್ಚ ಸುದೀಪ್ ರವರ ತಂಡ ಸಹಾಯ ಮಾಡಿದ್ದು, ಕೊನೆಯ ಕ್ಷಣದವರೆಗೂ ಅವರ ಊಟ ಮತ್ತು ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಸದ್ಯ ಸುದೀಪ್ ಚಾರಿಟೇಬಲ್ ಸೊಸೈಟಿಯ ವತಿಯಿಂದ ಕಮಲಮ್ಮ ಮಂಡಿ ಚಿಕಿತ್ಸೆ ಮಾಡಿಸುವ ವ್ಯವಸ್ಥೆ ನಡೆಯುತ್ತಿದೆ.