ಜಮ್ಮು ಕಾಶ್ಮೀರ: ಪುಲ್ವಾಮಾದಲ್ಲಿ ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರುನಾಡಿನ ಯೋಧ ಹುತಾತ್ಮರಾಗಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಯ ಶಂಕರೆಪ್ಪ ಬೊಮ್ಮನಹಳ್ಳಿ (44) ಅವರು ವೀರಮರಣ ಹೊಂದಿದವರು.
ನಿನ್ನೆ ಮುಂಜಾನೆ ಮೂರು ಗಂಟೆ ಸುಮಾರಿಗೆ ರಜಪೂತ್- ಪೆರೆಂಟ್ ಯುನಿಟ್- 38 ಅಸಾಲ್ಟ್ ಎಂಜಿನಿಯರ್ ರೆಜಿಮೆಂಟ್ ಯೋಧರು ಪುಲ್ವಾಮಾದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಉಗ್ರರು ಇವರಿಗೆ ಎದುರಾಗಿದ್ದು ಗುಂಡಿನ ಚಕಮಕಿ ಆರಂಭವಾಗಿದೆ. ಈ ವೇಳೆ ಕಾಶಿರಾಯ ಅವರು ಉಗ್ರರ ವಿರುದ್ಧ ಸೆಣಸಾಡುತ್ತಾ ಹುತಾತ್ಮರಾಗಿದ್ದಾರೆ. ಮೂವರು ಉಗ್ರರು ಹತರಾಗಿದ್ದು, ಕೆಲವು ಯೋಧರಿಗೆ ಗಾಯಗಳಾಗಿವೆ.
ಇಂದು ಮೃತ ಯೋಧನ ಪಾರ್ಥಿವ ಶರೀರವನ್ನು ಜಮ್ಮು-ಕಾಶ್ಮೀರದಿಂದ ನೇರವಾಗಿ ಬೆಳಗಾವಿಯ ಸಾಮ್ರಾ ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದೆ. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ಹುಟ್ಟೂರು ಬಸವನಬಾಗೇವಾಡಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
2005ರಲ್ಲಿ ಭಾರತೀಯ ಸೇನೆ ಸೇರಿದ್ದ ಕಾಶಿರಾಯ ಅವರು ಕಾಶ್ಮೀರ, ಪಂಜಾಬ್ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಮೃತ ಯೋಧನಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ-ತಾಯಿ, ಇಬ್ಬರು ಸಹೋದರರು ಇದ್ದಾರೆ. ಪುಲ್ವಾಮಾದ ಉಗ್ರರ ದಾಳಿಯಲ್ಲಿ ಅಸುನೀಗಿದ ಯೋಧ ಕಾಶಿರಾಯ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಕೇವಲ ಕುಟುಂಬಸ್ಥರು ಮಾತ್ರವಲ್ಲ, ರಾಜ್ಯದ ಜನರು ಕೂಡ ಕಣ್ಣೀರು ಹಾಕುತ್ತಿದ್ದಾರೆ.