Ad Widget .

ಮುಜುರಾಯಿ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ. 13 ವರ್ಷಗಳಿಂದ ಮಳೆನೀರಿಗೆ ಮೈಯೊಡ್ಡುತ್ತಿದ್ದಾನೆ ಕುಕ್ಕೆ ಪುರದೊಡೆಯ ಶ್ರೀಸುಬ್ರಹ್ಮಣ್ಯ

Ad Widget . Ad Widget .

ಮಂಗಳೂರು, ಜುಲೈ 3: ನಂಬಿದವರ ಇಷ್ಟಾರ್ಥವನ್ನು ಸಿದ್ಧಿಗೊಳಿಸುವ, ಅಭೀಷ್ಠೆಗಳನ್ನು ಪೂರೈಸುವ ದಕ್ಷಿಣ ಭಾರತದ ಪರಮ ಪವಿತ್ರ ಪುಣ್ಯಕ್ಷೇತ್ರ ಸುಬ್ರಹ್ಮಣ್ಯ ದೇವರು ಮಳೆಗೆ ಮೈ ಒಡ್ಡಿ 13 ವರ್ಷಗಳೇ ಕಳೆದುಹೋಗಿದೆ. ಅಧಿಕಾರಿಗಳ ಬೇಜವಾಬ್ದಾರಿ, ಮುಜುರಾಯಿ‌ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ರಾಜ್ಯದ ಪ್ರಸಿದ್ಧ ಯಾತ್ರಾಕ್ಷೇತ್ರಕ್ಕೆ ಪ್ರತೀವರ್ಷ ಪ್ಲಾಸ್ಟಿಕ್ ಹೊದಿಕೆ ಹಾಕಲಾಗುತ್ತಿದೆ.

Ad Widget . Ad Widget .

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಅತೀ ಶ್ರೀಮಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ಸನ್ನಿಧಿ ಮಳೆಗಾಲದಲ್ಲಿ ಸೋರಲಾರಂಭಿಸಿ ಹದಿಮೂರು ವರ್ಷಗಳಾಗಿವೆ. ಸುಬ್ರಹ್ಮಣ್ಯ ಸ್ವಾಮಿಯ ದೇವರ ಗರ್ಭಗುಡಿಯ ಸುತ್ತು ಪೌಳಿಯ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಪ್ರತೀ ಮಳೆಗಾಲದಲ್ಲೂ ಸುಬ್ರಹ್ಮಣ್ಯ ಸ್ವಾಮಿ ಮಳೆನೀರಿಗೆ ಮೈಯೊಡ್ಡುತ್ತಿದ್ದಾನೆ.

ಕಳೆದ 13 ವರ್ಷದಲ್ಲಿ ಕ್ಷೇತ್ರದಲ್ಲಿ ಬಂದ ಎಲ್ಲಾ ವ್ಯವಸ್ಥಾಪನಾ ಸಮಿತಿಗಳೂ ಮುಜುರಾಯಿ ಇಲಾಖೆಗೆ ದುರಸ್ಥಿ ಸರಿಪಡಿಸುವಂತೆ ಕ್ರಿಯಾ ಯೋಜನೆ ಮಾಡಿ ಕಳುಹಿಸಿವೆ. ಈ ಮೊದಲು 7 ಕೋಟಿ ರೂಪಾಯಿ ಮೌಲ್ಯದ ಕ್ರಿಯಾ ಯೋಜನೆ ಮಾಡಿದರೂ ಆನಂತರದ ಸಮಿತಿಗಳು 16 ಕೋಟಿಯ ವೆಚ್ಚದಲ್ಲಿ ಶಾಶ್ವತವಾದ ಪರಿಹಾರ ಮಾಡುವ ಕ್ರಿಯಾ ಯೋಜನೆ ರೂಪಿಸಿತ್ತು.

ಆದರೆ ಅಂದಿನಿಂದ ಇಂದಿನವರೆಗೆ ಮುಜರಾಯಿ ಇಲಾಖೆ ಮಾತ್ರ ಈ ವಿಚಾರಕ್ಕೆ ಗಮನವನ್ನೇ ಹರಿಸಿಲ್ಲ. ಹೀಗಾಗಿ ಬಾರಿಯ ಮಳೆಗಾಲ ಸೇರಿದಂತೆ ಪ್ರತೀ ಮಳೆಗಾಲದಲ್ಲೂ ಸುಬ್ರಹ್ಮಣ್ಯ ಸ್ವಾಮಿಗೆ ಬೆಚ್ಚನೆಯ ಛಾವಣಿ ಇಲ್ಲದೆ, ಮಳೆ ನೀರಿನಲ್ಲಿ ನೆನೆಯುತ್ತಲೇ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ.

ರಾಜ್ಯದ ಶ್ರೀಮಂತ ದೇವಸ್ಥಾನದಲ್ಲೇ ಈ ರೀತಿಯ ದುರಾವಸ್ಥೆಗೆ ಕಾರಣವಾದ ವ್ಯವಸ್ಥೆಯ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಇದೀಗ ‌ಭಕ್ತ ಹಿತರಕ್ಷಣಾ ಸಮಿತಿ ಮತ್ತೊಮ್ಮೆ ಸರಕಾರಕ್ಕೆ ದೇವಳದ ಗರ್ಭಗುಡಿ ದುರಸ್ತಿಗೆ ‌ಪತ್ರ ಬರೆದಿದೆ.

ಕ್ಷೇತ್ರದ ಗರ್ಭಗುಡಿ ಸುತ್ತುಪೌಳಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಕಳೆದ 13 ವರ್ಷಗಳಿಂದ ಗರ್ಭಗುಡಿಯ ಸುತ್ತಪೌಳಿಯು ಮಳೆಯಿಂದ ಸೋರುತ್ತಿದ್ದು, ಪ್ಲಾಸ್ಟಿಕ್ ಹೊದಿಕೆಯಲ್ಲೇ ಮಳೆಗಾಲವನ್ನು ಕಳೆಯಲಾಗುತ್ತಿದೆ. ಈ ಬಾರಿ ಮತ್ತೆ ಪ್ಲಾಸ್ಟಿಕ್ ಹೊದಿಕೆಯೇ ಅನಿವಾರ್ಯವಾಗಿದೆ. ಈ ಹಿಂದೆ ಪ್ಲಾಸ್ಟಿಕ್ ಹೊದಿಕೆಯ ಬಗ್ಗೆ ಭಕ್ತರಿಂದ ಆಕ್ರೋಶ ಕೇಳಿಬಂದಾಗ ವೈದಿಕ ಚಿಂತನೆ ಮೂಲಕ ಸುತ್ತುಪೌಳಿ ತೆಗೆಯುವ ನಿರ್ಧಾರದ ಬಗ್ಗೆ ಚಿಂತಿಸುವುದಾಗಿ ಇಲಾಖೆ ಹೇಳಿತ್ತು.

13 ವರ್ಷಗಳಿಂದಲೂ ಇದೇ ಮಾತು ಮುಂದುವರೆದಿದ್ದು, ಈವರೆಗೂ ಸುಬ್ರಹ್ಮಣ್ಯನಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಹಿನ್ನಲೆ ಈ ಬಾರಿ ಮತ್ತೊಮ್ಮೆ ಕುಕ್ಕೆ ಹಿತರಕ್ಷಣಾ ಸಮಿತಿ‌ಯಿಂದ ಮತ್ತೆ ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಮಾಡಿದೆ.

ರಾಜ್ಯದ ಬೊಕ್ಕಸಕ್ಕೆ ಪ್ರತಿವರ್ಷ ಭಾರೀ ಆದಾಯ ನೀಡುವ ಕುಕ್ಕೆ ದೇವಸ್ಥಾನಕ್ಕೆ ಸರ್ಕಾರದಿಂದ ವಿಶೇಷ ಅನುದಾನವೇನೂ ಬೇಕಾಗಿಲ್ಲ. ದೇವಸ್ಥಾನದ ಆದಾಯವನ್ನೇ ಬಳಸಿ ದುರಸ್ತಿ ಕಾರ್ಯ ಮಾಡಬಹುದಾಗಿದೆ. ಆದರೆ ಅದೂ ಸಾಧ್ಯವಾಗದಿರುವುದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೇ, ಅಥವಾ ಕಾಲ ಕೂಡಿಬಂದಿಲ್ಲವೇ? ಸುಬ್ರಹ್ಮಣ್ಯ ಸ್ವಾಮಿಯೇ ಉತ್ತರಿಸಬೇಕಿದೆ.

Leave a Comment

Your email address will not be published. Required fields are marked *