ಗದಗ: ಚೊಚ್ಚಲು ಗರ್ಭಿಣಿಯರಿಗೆ ಆರತಿ ಬೆಳಗಿ, ಹೂ ಗಳಿಂದ ಅಲಂಕರಿಸಿ, ಬಾಗಿನ ತುಂಬಿ ಸೀಮಂತ ಕಾರ್ಯಕ್ರಮ ಮಾಡುವುದು ಸಾಮಾನ್ಯ. ಆದರೆ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಗೋವಿಗೂ ಸೀಮಂತ ಮಾಡಲಾಗಿದೆ.
ಮೆಣಸಗಿ ಗ್ರಾಮದ ಶ್ರೀಕಾಂತ್ ಗೂರಮ್ಮಣ್ಣವರ್ ಎಂಬವರ ಮನೆಯಲ್ಲಿ ಸಾಕಿದ್ದ ಗೌರಿ ಎಂಬ ಹಸುವಿಗೆ ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ. ಮನೆಯ ಮಗಳಿಗೆ ತವರು ಮನೆಯವರು ಬಳುವಳಿಯಾಗಿ ಕರು ನೀಡಿದ್ದರು. ಸದ್ಯ 7 ವರ್ಷದ ನಂತರ ಗೌರಿ ಗರ್ಭ ಧರಿಸಿರುವುದರಿಂದ ಮನೆ ಮಂದಿಗೆಲ್ಲಾ ಸಂತಸ ತಂದಿದೆ.
8 ತಿಂಗಳ ಗರ್ಭಿಣಿಯಾದ ಗೌರಿಗೆ ದೂರದ ಬಾದಾಮಿಯಿಂದ ಬೀಗರನ್ನು ಕರೆಯಿಸಿ ಸೀಮಂತದ ವಿಧಿ ವಿಧಾನಗಳನ್ನ ನೆರವೇರಿಸಲಾಗಿದೆ. ಬಂದ ಸಂಬಂಧಿಕರೆಲ್ಲರೂ ಹೊಸ ಉಡುಪು ತೊಟ್ಟು, ಗರ್ಭಿಣಿಯರಿಗೆ ನಡೆಸುವ ಸೀಮಂತ ಕಾರ್ಯದಂತೆ ಗೋವಿಗೆ ರೇಷ್ಮೆ ಸೀರೆ ಉಡಿಸಿ, ಕೊಡಿಗೆ ಹಸಿರು ಬಳೆ ತೊಡಸಿ, ಕೊರಳಿಗೆ ಮಾಲೆಹಾಕಿ, ಕಾಲಿಗೆ ಕಾಲ್ಗೆಜ್ಜೆ ಹಾಕಿಸಿ, ಶೃಂಗಾರಗೊಳಿಸಿ ಕಾಮಧೇನುವನ್ನು ತಮ್ಮ ಮನೆಯ ಮಗಳಿಗೆ ಮಾಡುವಂತೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಮಾಡಿದ್ದಾರೆ.
ತರತರನಾದ ಅಡುಗೆ ಮಾಡಿ ಎಲ್ಲರೂ ಊಟ ಮಾಡಿ, ಆಕಳಿಗೂ ಊಣಬಡಿಸಿದ್ದಾರೆ. ಗೂರಮ್ಮಣ್ಣವರ್ ಕುಟುಂಬ ಮೂಲತ: ಕೃಷಿಕರು. ಇವರು ಮನೆಯ ಮಗಳಿಗೆ ಕೊಟ್ಟಿರುವ ಗೋ ಮಾತೆಗೆ ಗೌರಿ ಅಂತ ಹೆಸರಿಟ್ಟು ಪ್ರೀತಿ, ಅಕ್ಕರೆಯಿಂದ ಸಾಕಿದ್ದರು. 7 ವರ್ಷದ ನಂತರ ಈಗ ಗೌರಿ ಗರ್ಭವತಿಯಾಗಿದ್ದು, ರೈತಾಪಿ ವರ್ಗಕ್ಕೆ ಒಳ್ಳೆಯದಾಗಲಿ, ಗೋ ಸಂತತಿ ಉಳಿಯಲಿ, ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದಾರೆ. ಅನೇಕ ಮುತ್ತೈದೆಯರು ಆರತಿ ಬೆಳಗುವುದರ ಮೂಲಕ ಉಡಿ ತುಂಬುವ ಸಂಪ್ರದಾಯ ನೇರವೇರಿಸಿ, ಊರು ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ.
ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಗೋ ಪೂಜೆ ಮಾಡುವ ಸಂಪ್ರದಾಯವಿದೆ. ಆದರೆ ಗೋವಿಗೆ ಸೀಮಂತ ಮಾಡೋದು ಅಪರೂಪ. ಇತ್ತೀಚಿನ ದಿನಗಳಲ್ಲಿ ಭಾರತೀಯ ಗೋ ಸಂತತಿ ಅಳಿವಿನಂಚಿನಲ್ಲಿವೆ. ಗೋ ಸಂತತಿ ಉಳಿಸಲು, ಕಾಮಧೇನುವಾದ ಗೋವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಜನರಲ್ಲಿ ಗೋವುಗಳ ಬಗ್ಗೆ ಭಕ್ತಿ, ಪೂಜನೀಯ ಭಾವನೆ ಬೆಳೆಯುತ್ತದೆ. ಜೊತೆಗೆ ರೈತರ ಬದುಕು ಹಸನಾಗುತ್ತದೆ ಎಂಬುದು ಗ್ರಾಮಸ್ಥರ ಮನದಾಳದ ಮಾತಾಗಿದೆ.