ಬೆಂಗಳೂರು: ಹಿಂದಿನ ಸೆಮಿಸ್ಟರ್’ನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗೆ ತೇರ್ಗಡೆ ಗೊಳಿಸುವಂತೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಆನ್ಲೈನ್ ತರಗತಿ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.
ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಬೆಸ ಸೆಮಿಸ್ಟರ್’ ಸೆಮಿಸ್ಟರ್ ಪರೀಕ್ಷೆಗಳು ಕೋವಿಡ್ ಕಾರಣದಿಂದ ಬಾಕಿಯಾಗಿತ್ತು. ಸಂಪೂರ್ಣ ತರಗತಿಗಳು ನಡೆದಿರಲಿಲ್ಲ. ಅದೆಲ್ಲದೆ ಇದೀಗ ಮುಂದಿನ ಸೆಮಿಸ್ಟರ್’ನ ತರಗತಿಗಳನ್ನು ಆನ್’ಲೈನ್’ನಲ್ಲಿ ಈಗಾಗಲೇ ಆರಂಭಿಸಲಾಗಿದೆ. ಅದಾಗ್ಯೂ ಹಿಂದಿನ ಸೆಮಿಸ್ಟರ್’ನ ಪರೀಕ್ಷೆಯನ್ನು, ತರಗತಿಗಳು ಆರಂಭವಾದ ನಂತರ ನಡೆಸುವುದಾಗಿ ವಿಶ್ವವಿದ್ಯಾನಿಲಯಗಳು ಹೇಳುತ್ತಿವೆ.
ಈ ಬಗ್ಗೆ ಹಿಂದಿನ ಸೆಮಿಸ್ಟರ್ ನ ಪರೀಕ್ಷೆಯನ್ನು ನಡೆಸದಂತೆ ವಿನಂತಿಸಿ ರಾಜ್ಯದ ಹಲವಾರು ವಿದ್ಯಾರ್ಥಿ ಸಂಘಟನೆಗಳು ರಾಜ್ಯ ಸರಕಾರ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ವಿನಂತಿಸಿಕೊಂಡಿದ್ದವು. ಆದರೆ ಇದ್ಯಾವುದಕ್ಕೂ ಪ್ರತ್ಯುತ್ತರ ಬಾರದ ಕಾರಣ ಮುಂದಿನ ಹಂತದ ಪ್ರಯತ್ನ ಮಾಡುವುದಾಗಿ ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ.
ಸದ್ಯ ರಾಜ್ಯಾದ್ಯಂತ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಮೆಡಿಕಲ್, ಡಿಪ್ಲೋಮೋ, ಐಟಿಐ ಇತ್ಯಾದಿ ತರಗತಿಗಳಿಗೆ ಆನ್ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ. ರಾಜ್ಯ ಮಟ್ಟದ ವಿದ್ಯಾರ್ಥಿಗಳ ಹೋರಾಟ ಸಮಿತಿ ಮತ್ತು ಎಐಡಿಎಸ್ಒ ರಾಜ್ಯ ಸಮಿತಿ ಜಂಟಿಯಾಗಿ ನಾಳೆ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಆನ್ ಲೈನ್ ತರಗತಿ ಬಹಿಷ್ಕಾರ ಕ್ಕೆ ಕರೆ ನೀಡಿದೆ.