ಮಡಿಕೇರಿ: ಕೊಡಗಿನಲ್ಲಿ ಕಾರ್ಮಿಕರ ಕೊರತೆಯಿದೆ. ಕಾರ್ಮಿಕರ ಅಗತ್ಯವಿದೆ ಎಂದು ತೋಟದ ಮಾಲೀಕರು ಹೇಳುತ್ತಿದ್ದಾರೆ. ಆದ್ದರಿಂದ ಅಸ್ಸಾಂ ನಿಂದ ಬರುತ್ತಿರುವ ಕಾರ್ಮಿಕರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಸಾಂ ಕಾರ್ಮಿಕರು ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ ಕಾರ್ಮಿಕರ ಅಗತ್ಯತೆಯ ಬಗ್ಗೆ ತೋಟದ ಮಾಲೀಕರು ಗಮನ ಸೆಳೆದಿದ್ದಾರೆ. ಬಂದ ಕಾರ್ಮಿಕರನ್ನು ಕ್ವಾರೆಂಟೈನ್ ಒಳಪಡಿಸುವುದಲ್ಲದೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದರು.
ಬೇರೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪರೀಕ್ಷೆ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪ್ರತಿದಿನ 200 ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕಿತರ ಸಂಖ್ಯೆ ೧೦೦ ಕ್ಕಿಂತ ಕಡಿಮೆಯಾಗುವವರೆಗೆ ಅನ್‌ಲಾಕ್ ಸೂಕ್ತವಲ್ಲವೆಂದು ಅಭಿಪ್ರಾಯಪಟ್ಟರು.
ರೆಸಾರ್ಟ್, ಹೋಂಸ್ಟೇ ವಿರುದ್ಧ ಕ್ರಮ: ಜಿಲ್ಲೆಗೆ ಪ್ರವಾಸಿಗರ ಅಗಮನವನ್ನು ನಿಷೇಧಿಸಲಾಗಿದೆ. ನಿಯಮ ಮೀರಿ ಪ್ರವಾಸಿಗರಿಗೆ ಆಶ್ರಯ ನೀಡುವ ರೆಸಾರ್ಟ್, ಹೋಂಸ್ಟೇ ಮತ್ತು ಲಾಡ್ಜ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಪ್ಪಚ್ಚುರಂಜನ್ ಎಚ್ಚರಿಸಿದ್ದಾರೆ.