ಮಂಗಳೂರು: ನಗರ ಹೊರವಲಯದ ದೇರಳಕಟ್ಟೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಮಿಳುನಾಡು ಮೂಲದ ವೈದ್ಯ ವಿದ್ಯಾರ್ಥಿನಿ ವಿನು ರಶ್ಮಿ (27) ಮತ್ತು ಕಾಸರಗೋಡು ಮೂಲದ ಅಜ್ಮಲ್ (24) ಎಂದು ಗುರುತಿಸಲಾಗಿದೆ. ವಿನು ರಶ್ಮಿ ಸುರತ್ಕಲ್ ನಲ್ಲಿ ವಾಸ್ತವ್ಯ ಹೂಡಿದ್ದು ನಗರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಳೆ. ವ್ಯಾಸಂಗದ ಜೊತೆ ಈಕೆ ಕಾಸರಗೋಡಿನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದು ಅಲ್ಲಿ ಪರಿಚಿತನಾದ ವೈದ್ಯ ಡಾ. ನಧೀರ್ ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ. ಸದ್ಯ ಆತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಪ್ರಮುಖ ಆರೋಪಿ ನದೀರ್, ಅಜ್ಮಲ್ ಮತ್ತು ರಶ್ಮಿ ಮೂವರು ಸ್ನೇಹಿತರು. ಯುರೋಪಿನಿಂದ ನಿಷೇಧಿತ ಹೈಡ್ರೋವೀಡ್ ಗಾಂಜಾವನ್ನು ಮಂಗಳೂರಿನಲ್ಲಿ ಮಾರಾಟಮಾಡಲು ತಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಮಾದಕ ದ್ರವ್ಯ ಪ್ರತಿ ಗ್ರಾಂಗೆ 2,000-25,000 ರೂ ಬೆಲೆ ಹೊಂದಿದೆ. ಬಂಧಿತರಿಂದ ಒಟ್ಟು 1,236 ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದು ಕೋಟ್ಯಂತರ ರೂ. ಬೆಲೆಬಾಳುತ್ತದೆ ಎನ್ನಲಾಗಿದೆ.
ಆರೋಪಿಗಳಿಂದ ಕಾರು 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.