ಉಪ್ಪಿನಂಗಡಿ: ವಾಹನ ತಪಾಸಣೆಯ ವೇಳೆ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಆತೂರು ಎಂಬಲ್ಲಿ ಮಂಗಳವಾರದಂದು ನಡೆದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೃತ ಸವಾರನನ್ನು ಆತೂರು ಬೈಲು ನಿವಾಸಿ ಹಾರಿಸ್(33) ಎಂದು ಗುರುತಿಸಲಾಗಿದೆ. ಮೃತರು ತನ್ನ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿದ್ದ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ. ಈ ವೇಳೆ ದಾಖಲಾತಿ ತೆಗೆದುಕೊಂಡು ರಸ್ತೆ ದಾಟುವ ವೇಳೆ ಟಾಟಾ ಏಸ್ ಗೂಡ್ಸ್ ವಾಹನವು ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ನೂರಾರು ಜನ ಸೇರಿದ್ದಲ್ಲದೆ ಪೊಲೀಸರು ಚೆಕ್ ಪೋಸ್ಟ್ ನಲ್ಲಿ ಸಮಯಕ್ಕಿಂತ ಮೊದಲೇ ವಾಹನ ತಪಾಸಣೆ ನಡೆಸುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬ್ಯಾರಿಕೇಡ್ ಎಸೆದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಪೊಲೀಸರು ಕುಳಿತುಕೊಳ್ಳಲೆಂದು ಸಾರ್ವಜನಿಕರು ನಿರ್ಮಿಸಿಕೊಟ್ಟಿದ್ದ ಶೆಡ್ ನ್ನು ಧ್ವಂಸಗೊಳಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಲಾಠಿ ಬೀಸಿದ್ದಾರೆ. ಸ್ಥಳಕ್ಕೆ ಭೇಟಿ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಕಾರರನ್ನು ಸಮಾಧಾನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.