ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಸೇನಾ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ಸೇರಿದಂತೆ ಉಗ್ರ ಚಟುವಟಿಕೆಗಳು ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸೇನಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ.
ಕಳೆದೆರಡು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಅತಿ ಸುರಕ್ಷಿತ ವಾಯುಪಡೆಯ ವಿಮಾನ ನಿಲ್ದಾಣದ ಮೇಲೆ ಡ್ರೋನ್ ಮೂಲಕ ಉಗ್ರರು ಸ್ಪೋಟ ನಡೆಸಿದ್ದರು. ಅದರ ಬೆನ್ನಲ್ಲೇ ಪುಲ್ವಾಮಾದಲ್ಲಿ ಪೊಲೀಸ್ ವಿಶೇಷಾಧಿಕಾರಿಗಳ ಮನೆಗೆ ನುಗ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದಲ್ಲದೆ ಚೀನಾ ಮತ್ತೆ ಗಡಿ ಕ್ಯಾತೆ ತೆಗೆದಿದೆ ಮತ್ತು ಗಡಿಯಲ್ಲಿ ಸಂಘರ್ಷದ ವಾತಾವರಣ ಮತ್ತೆ ಸೃಷ್ಟಿಯಾದಂತೆ ಕಾಣುತ್ತಿದೆ. ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಈ ಮಹತ್ವದ ಸಭೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಸಭೆಯಲ್ಲಿ ಕಣಿವೆ ರಾಜ್ಯದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಮತ್ತು ಭದ್ರತೆ ವಿಷಯದಲ್ಲಿ ಮುಂದಿನ ಸವಾಲುಗಳ ಬಗ್ಗೆ ಚರ್ಚೆ ನಡೆದಿದೆ.
ರಕ್ಷಣಾ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ತರುವ ಬಗ್ಗೆ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಪ್ರಸ್ತಾಪ ಇಟ್ಟಿದ್ದಾರೆ ಎನ್ನಲಾಗಿದೆ.