ಮಂಗಳೂರು: ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಇಂದಿನಿಂದ ಆರ್’ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ದ. ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಹೇಳಿದ್ದಾರೆ.
ನಿನ್ನೆ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ತಾವೇ ಕುದ್ದು ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಮಂಗಳವಾರ (29-06-2021) ದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೇರಳ ಗಡಿ ಭಾಗದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದು, ಡೆಲ್ಟಾ ವೇರಿಯಂಟ್ ಪತ್ತೆಯಾಗಿರುವ ಸಂಶಯವಿದೆ. ಈ ಬಗ್ಗೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ತಲಪಾಡಿ, ನೆಟ್ಟಣಿಗೆ ಮುಡ್ನೂರು(ಈಶ್ವರಮಂಗಲ), ಸಾರಡ್ಕ, ಜಾಲ್ಸೂರು, ಪಾಣಾಜೆ ಸೇರಿದಂತೆ ಎಲ್ಲಾ ಗ್ರಾಮೀಣ ಭಾಗದ ಗಡಿಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಸಂಚಾರ ಹೆಚ್ಚಿರುವಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.