ನವದೆಹಲಿ: ದೇಶದ ಎಲ್ಲಾ ಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಲಸಿಕೆ ಗರ್ಭಿಣಿಯರಿಗೆ ಉಪಯುಕ್ತವಾಗಲಿದೆ ಮತ್ತು ಅದನ್ನು ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮತಿಸಿತ್ತು. ಆದರೆ ಭಾರತದಲ್ಲಿ ವೈದ್ಯಕೀಯ ಪ್ರಯೋಗ ದತ್ತಾಂಶದ ಕೊರತೆ ಇತ್ತು ಎಂದು ಹೇಳಲಾಗಿತ್ತು. ಇದೀಗ ವೈಜ್ಞಾನಿಕ ಪುರಾವೆ ಗಳನ್ನು ಅಧ್ಯಯನ ಮಾಡುವ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಗರ್ಭಿಣಿಯರಿಗೆ ಲಸಿಕೆಯ ಅಗತ್ಯತೆ ಬಗ್ಗೆ ಪುರಾವೆಗಳನ್ನು ಒದಗಿಸಿದೆ. ಮತ್ತು ಲಸಿಕೆ ಗರ್ಭಿಣಿಯರಿಗೆ ಯಾವುದೇ ಅಡ್ಡ ಪರಿಣಾಮ ಉಂಟುಮಾಡುವುದಿಲ್ಲ ಎಂದು ಹೇಳಿದೆ ಎಂದು ತಿಳಿಸಿದ್ದಾರೆ.