ಹಾಸನ: ಮಂಗಳೂರಿನ ಎಂಆರ್ಪಿಎಲ್ ನಲ್ಲಿ ಸ್ಥಳೀಯರಿಗೆ ಯಾವುದೇ ಆದ್ಯತೆ ನೀಡದೆ ಉತ್ತರ ಭಾರತದ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡ ಬಗ್ಗೆ ಆಕ್ರೋಶ ಹೊರಹಾಕಿರುವ ಹಾಸನ ಕ್ಷೇತ್ರದ ಯುವ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯರಿಂದ ಮತ್ತು ರಾಜ್ಯ ಸರ್ಕಾರದಿಂದ ಮಂಗಳೂರಿನಲ್ಲಿ ಭೂಮಿ ಪಡೆದು ಎತ್ತರಕ್ಕೆ ಬೆಳೆದಿರುವ ಸಂಸ್ಥೆ ಎಂಆರ್ಪಿಎಲ್. ತುಳುನಾಡ ಜನರ ಸಹಯೋಗದಲ್ಲಿ ಬೆಳೆದು ಇಲ್ಲಿನ ಯುವಕರನ್ನು ಎಂಆರ್ಪಿಎಲ್ ಕಡೆಗಣಿಸಿರುವುದು ಸರಿಯಲ್ಲ. ಇದು ಪ್ರಾದೇಶಿಕತೆಯ ಭಾವನೆಗೆ ದ್ರೋಹ ಮಾಡಿದೆ. ಮುಂದಿನ ನೇಮಕಾತಿ ವೇಳೆ ತುಳುನಾಡನ್ನು ಕಡೆಗಣಿಸಿದರೆ ಸಂಸತ್ತಿನಲ್ಲಿ ಹೋರಾಟ ಮಾಡವೆ. ರಾಜ್ಯದ ಸಂಸದನಾಗಿ ತುಳುನಾಡ ಯುವಕರ ದನಿಯಾಗುವುದು ನನ್ನ ಕರ್ತವ್ಯ ಎಂದಿದ್ದಾರೆ.
ನಮ್ಮ ಪಕ್ಷ ಎಂದಿಗೂ ತುಳುನಾಡ ಜನರನ್ನು ಕಡೆಗಣಿಸುವುದಿಲ್ಲ. ಸದ್ಯದಲ್ಲೇ ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿ ತುಳುನಾಡ ಯುವಕರಿಗೆ ನ್ಯಾಯ ಕೊಡಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುವೆ ಎಂದು ಪ್ರಜ್ವಲ್ ಹೇಳಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಎಂಆರ್ಪಿಎಲ್ 230 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವಾಗ ಕೇವಲ ನಾಲ್ಕು ಜನ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ಆಕ್ರೋಶ ಹೊರಬಿದ್ದ ಬೆನ್ನಲ್ಲೇ ಸರ್ಕಾರ ಕಂಪನಿಯ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದಿತ್ತು.