ಲಖನೌ: ಅಪರಿಚಿತ ಮಹಿಳೆಯರಿಗೆ ಬೆತ್ತಲಾಗಿ ನಿಂತು ವಿಡಿಯೋ ಕಾಲ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ನಿರಂತರವಾಗಿ ಯುವಕನ ಉಪಟಳದಿಂದ ಬೇಸತ್ತಿದ್ದ ಮಹಿಳೆಯರು ಉತ್ತರಪ್ರದೇಶದ ಮಹಿಳಾ ಸಹಾಯವಾಣಿಯೊಂದಕ್ಕೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಶುವ್ ಕುಮಾರ್ ವರ್ಮಾ ಎಂಬಾತನನ್ನು ಬಂಧಿಸಿದ್ದಾರೆ.
ಬಿಎ ಪದವೀಧರನಾಗಿರುವ ಈತ ಸ್ಟೇಷನರಿ ಅಂಗಡಿಯೊಂದನ್ನು ನಡೆಸುತ್ತಿದ್ದ. ನಿತ್ಯ ಕೆಲಸ ಮುಗಿದ ಮೇಲೆ ಮನೆಗೆ ತೆರಳಿ ಯಾವುದಾದರೂ ಮೊಬೈಲ್ ನಂಬರ್ ಟೈಪ್ ಮಾಡಿ ಟ್ರೂಕಾಲರ್ ಮೂಲಕ ಪರೀಕ್ಷಿಸುತ್ತಿದ್ದ. ನಂಬರ್ ಮಹಿಳೆಯರದ್ದು ಎಂದು ಗೊತ್ತಾದ ಕೂಡಲೇ ಅದಕ್ಕೆ ವಾಟ್ಸಪ್ ಮೂಲಕ ಬೆತ್ತಲಾಗಿ ನಿಂತುಕೊಂಡು ವಿಡಿಯೋ ಕಾಲ್ ಮಾಡುತ್ತಿದ್ದ. ಅತ್ತ ಕಡೆಯಲ್ಲಿ ಕಾಲ್ ರಿಸೀವ್ ಆಗುತ್ತಿದ್ದಂತೆ ವಿಡಿಯೋ ಸ್ಕ್ರೀನ್ ರೆಕಾರ್ಡ್ ಮಾಡುತ್ತಿದ್ದ. ಇನ್ನೂ ಆ ವಿಡಿಯೋ ಇಟ್ಟುಕೊಂಡು ಹಲವಾರು ರೀತಿಯಲ್ಲಿ ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ.
ಮರ್ಯಾದೆಗೆ ಅಂಜಿ ಈತನ ವಿರುದ್ಧ ಮಹಿಳೆಯರು ನೇರವಾಗಿ ದೂರು ದಾಖಲಿಸಿಲ್ಲ. ಇನ್ನು ಈ ಬಗ್ಗೆ ಮಹಿಳಾ ಸಹಾಯವಾಣಿಗೆ ಬರೋಬ್ಬರಿ 370 ದೂರುಗಳು ದಾಖಲಾಗಿವೆ. ಇಷ್ಟು ದೂರುಗಳು ದಾಖಲಾಗಿವೆಯಾದರೂ, ದೂರು ನೀಡದೆ ಹೆದರಿ ಸುಮ್ಮನೆ ಕುಳಿತ ಮಹಿಳೆಯರು ಸಾವಿರಾರು ಮಂದಿ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಶುವ್ ಕುಮಾರ್ ಸುಮಾರು ಏಳಕ್ಕೂ ಹೆಚ್ಚು ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿ ಪ್ರತಿದಿನ ಹಲವಾರು ಮಹಿಳೆಯರಿಗೆ ವೀಡಿಯೋ ಕಾಲ್ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಈತನ ಬಳಿಯಿಂದ ಏಳು ಸ್ಮಾರ್ಟ್ ಫೋನ್ ಗಳನ್ನು ವಶಪಡಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.