ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ತೋಟಕ್ಕೆ ಹೋದ ರೈತನ ಬರ್ಬರ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪಾಪಿ ಮಗನೇ ಸುಪಾರಿ ಲಕ್ಷ ರೂ.ಕೊಟ್ಟು ಜನ್ಮ ಕೊಟ್ಟ ತಂದೆಯನ್ನೇ ಕೊಲೆ ಮಾಡಿಸಿರುವುದಾಗಿ, ಅದಲ್ಲದೆ ಒಂದಲ್ಲಾ, ಎರಡಲ್ಲಾ ಮೂರನೇ ಬಾರಿಯಲ್ಲಿ ತಂದೆ ತಂದೆಯ ಕೊಲೆ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ರೈತ ಶ್ರೀನಿವಾಸಮೂರ್ತಿ (65)ರವರು ಮಗನಿಂದ ಕೊಲೆಯಾದವರು. ಅವರ ಮಗ ರೋಹಿತ್, ಹಾಗೂ ರಂಗನಾಥ್ ಮತ್ತು ರವಿಕುಮಾರ್ ಕೊಲೆ ಪ್ರಕರಣದ ಅರೋಪಿಗಳು. ಶ್ರೀನಿವಾಸಮೂರ್ತಿಯವರ ಮಗ ರೋಹಿತ್ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದ. ಈ ವ್ಯವಹಾರದಲ್ಲಿ ತಂದೆ ಸುಮಾರು 56 ಲಕ್ಷ ರೂಪಾಯಿ ನಷ್ಟ ಮಾಡಿದ ಎಂಬ ಕೋಪದ ಜೊತೆಗೆ ತಾಯಿ ಸತ್ತ ನಂತರ ಅನೈತಿಕ ಸಂಬಂಧದಿಂದ ಮನೆಯವರಿಗೆ ಅವಮಾನ ಮಾಡುತ್ತಿದ್ದ. ಮಕ್ಕಳು ಅಡ್ಡದಾರಿ ಹಿಡಿದರೆ ಹೆತ್ತವರು ಬುದ್ಧಿ ಹೇಳಬೇಕು. ಆದರೆ ನನ್ನ ಬಾಳಿಗೆ ತಂದೆಯೇ ಮುಳುವಾಗುತ್ತಿದ್ದಾನೆ ಎಂದು ಭಾವಿಸಿದ ಮಗ ರೋಹಿತ್ ಸ್ನೇಹಿತರಾದ ರಂಗನಾಥ್, ರವಿಕುಮಾರ್ ಜೊತೆಗೂಡಿ ಜೂನ್ 14ರ ರಾತ್ರಿ ತಮ್ಮದೇ ತೋಟದಲ್ಲಿ ತಂದೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಕೊಲೆಯಾದ ದಿನ ರೋಹಿತ್ ಏನೂ ಗೊತ್ತಿಲ್ಲದವನಂತೆ ನಟಿಸಿ, ಮಾಧ್ಯಮದವರು ಕೊಲೆ ಬಗ್ಗೆ ಕೇಳಿದಾಗ ಏನೂ ಅರಿವಿಲ್ಲದಂತೆ ನಾಟಕದ ಮಾತಗಳನ್ನಾಡಿದ್ದ. ಇತ್ತ ಪ್ರಕರಣದ ಜಾಡು ಹಿಡಿದ ಗೌರಿಬಿದನೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಮಗ ರೋಹಿತ್ ತನ್ನ ಸ್ನೇಹಿತರಾದ ರವಿಕುಮಾರ್ ಹಾಗೂ ರಂಗನಾಥ್ ಗೆ 1 ಲಕ್ಷ ರೂಪಾಯಿಗೆ ತನ್ನ ತಂದೆಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದು, 30ಸಾವಿರ ರೂ. ಮುಂಗಡ ಕೊಟ್ಟಿದ್ದನಂತೆ.
ಅದರಂತೆ ತೋಟಕ್ಕೆ ನೀರು ಹಾಯಿಸಲು ಮೋಟರ್ ಆನ್ ಮಾಡಲು ಬಂದ ಶ್ರೀನಿವಾಸಮೂರ್ತಿಯನ್ನು ರಂಗನಾಥ್ ಹಾಗೂ ರವಿಕುಮಾರ್ ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದಿದ್ದರು. ಅಲ್ಲದೆ ಈ ಮೊದಲೇ ಶ್ರೀನಿವಾಸಮೂರ್ತಿಯನ್ನು ಕೊಲೆ ಮಾಡಲು ಮಗ ರೋಹಿತ್ ಊಟದಲ್ಲಿ ವಿಷ ಹಾಕಿ, ತೋಟದ ಶೆಡ್ ನಲ್ಲಿ ಸ್ಟಾರ್ಟರ್ ಗೆ ವಿದ್ಯುತ್ ಹರಿಸಿ ಕೊಲೆಗೆ ಯತ್ನಿಸಿದ್ದ. ಆದರೆ ಅಂದು ತಂದೆ ಸಾವಾಗಿರಲಿಲ್ಲ. ಈ ಸಲ ಮಿಸ್ ಆಗಬಾರದು ಎಂದು ಸ್ನೇಹಿತರಿಗೆ ಒಂದು ಲಕ್ಷ ರೂ.ಗೆ ಸುಪಾರಿ ನೀಡಿ, 30 ಸಾವಿರ ರೂ. ಅಡ್ವಾನ್ಸ್ ಕೊಟ್ಟು ತಾನೂ ಜೊತೆಗೂಡಿ ಹೆತ್ತ ತಂದೆಯನ್ನೇ ಹತ್ಯೆ ಮಾಡಿದ್ದಾನೆ. ಸದ್ಯ ಮೂವರನ್ನೂ ಬಂಧಿಸಿರುವ ಪೊಲೀಸರು, ಜೈಲಿಗಟ್ಟಿದ್ದಾರೆ.