ಉಡುಪಿ: ತೀರ್ಥಹಳ್ಳಿ-ಉಡುಪಿ ಹೆದ್ದಾರಿಯ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರಿ ಸರಕು ಸಾಗಾಣೆ ವಾಹನಗಳ ಸಂಚಾರಕ್ಕೆ ನಿಷೇದ ವಿಧಿಸಲಾಗಿದೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿ ರಸ್ತೆಯು ಕಿರಿದಾಗಿದ್ದು, ಮಳೆಗಾಲದಲ್ಲಿ ಭಾರಿ ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿದು, ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.
ಆದ್ದರಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ ೧೯೮೮ ರ ಕಲಂ ೧೧೫ ಹಾಗೂ ರಾಜ್ಯ ಮೋಟಾರು ವಾಹನಗಳ ನಿಯಮದ ಅನ್ವಯ ರಾಷ್ಟ್ರೀಯ ಹೆದ್ದಾರಿ ೧೬೯ ಎ ರಸ್ತೆಯ ಆಗುಂಬೆ ಘಾಟಿಯಲ್ಲಿ ಅಕ್ಟೋಬರ್ ೧೫ ರವರೆಗೆ ೧೨ ಟನ್ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿ, ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.
ಬದಲಿ ಮಾರ್ಗ: ಉಡುಪಿ – ಸಿದ್ದಾಪುರ – ಹೊಸಂಗಡಿ – ಬಾಳೆಬರೇ ಘಾಟ್ ಹುಲಿಕಲ್- ಮಾಸ್ತಿಕಟ್ಟೆ- ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹಾಗೂ ಮಂಗಳೂರು-ಕಾರ್ಕಳ-ಹೆಬ್ರಿ-ಸಿದ್ಧಾಪುರ-ಹೊಸಂಗಡಿ-ಬಾಳೆಬರೇ ಘಾಟ್ -ಹುಲಿಕಲ್-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಮಾರ್ಗವಾಗಿ ಶಿವಮೊಗ್ಗ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.