ಮಂಗಳೂರು: ಜಿಲ್ಲೆಯಲ್ಲಿ ಬುಧವಾರದಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 1 ರವರೆಗೆ ಬಸ್ ಸಂಚಾರಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರೂ, ಖಾಸಗಿ ಬಸ್‌ಗಳು ರಸ್ತೆಗಿಳಿಯವುದಿಲ್ಲ ಎಂದು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.
ಬಸ್‌ಗಳು ಸ್ಥಗಿತಗೊಂಡು ಎರಡು ತಿಂಗಳು ಕಳೆದಿದೆ. ತಾಂತ್ರಿಕ ಕಾರಣದಿಂದ ಏಕಾಏಕಿ ಬಸ್‌ಗಳನ್ನು ರಸ್ತೆಗಿಳಿಸಲು ಸಾಧ್ಯವಿಲ್ಲ. ಜೂನ್‌ನಲ್ಲಿ ಮುಂದಿನ ಒಂದು ವಾರದ ಅವಧಿಗೆ ಇಡೀ ತಿಂಗಳ ತೆರಿಗೆ ಪಾವತಿ ಸಾಧ್ಯವಿಲ್ಲ. ಶೇ. 50ರಷ್ಟು ಪ್ರಯಾಣಿಕರಿಗೆ ನಾವು ಪೂರ್ತಿ ತೆರಿಗೆ ಪಾವತಿಸಬೇಕು. ಅದು ಕಷ್ಟದ ವಿಷಯ. ಡೀಸೆಲ್ ಬೆಲೆ ಹೆಚ್ಚಳವಾದ ಕಾರಣ ಬಸ್ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಲಾಗಿದೆ. ಈ ಮನವಿಗೆ ಸರಕಾರ ಸ್ಪಂದಿಸಿಲ್ಲ. ಈ ಎಲ್ಲ ಕಾರಣದಿಂದ ಬುಧವಾರ ಬಸ್‌ಗಳನ್ನು ರಸ್ತೆಗಿಳಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಒಂದೆರಡು ದಿನಗಳಲ್ಲಿ ಬಸ್ ಮಾಲಕರ ಸಭೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಸರಕಾರ ನಮ್ಮ ಬೇಡಿಕೆ ಈಡೇರಿಸಿದರೆ ಜುಲೈ 1ರಿಂದ ಖಾಸಗಿ ಬಸ್ ಓಡಾಟ ಆರಂಭಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಇದೆ
ದ.ಕ. ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ಪ್ರಯಾಣಿಕರ ಲಭ್ಯತೆ ಆಧರಿಸಿ ಬುಧವಾರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಡೆಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.