ಗದಗ: ತಾಲೂಕಿನ ಹರ್ತಿ ಗ್ರಾಮದ ಜನರ ಜೀವನ ದುಸ್ತರವಾಗಿದೆ. ನೊಣಗಳ ಕಾಟಕ್ಕೆ ಇಲ್ಲಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಮನೆ ಒಳಗೆ, ಹೊರಗೆ ಎಲ್ಲಿ ಕೂತರು ಸಮಾಧಾನವೇ ಇಲ್ಲದಂತಾಗಿದೆ. ಊಟ, ನಿದ್ರೆ, ವಿಶ್ರಾಂತಿಗೂ ಬಿಡಲ್ಲಾ. ವೈರಿಗಳ ಆಟೋಟಪಕ್ಕೆ ಊರಿನ ಜನ ಬೇಸತ್ತು ಹೋಗಿದ್ದಾರೆ. ಈ ಗ್ರಾಮದ ಜನ ಏನು ತಪ್ಪು ಮಾಡಿರುವರೋ ಗೊತ್ತಿಲ್ಲ.

ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ, ದಂಡಿನ ಗುಂಡಿಗೆ ಹೆದರಲಿಲ್ಲಾ, ದಾಳಿಗೆ ಹೆದರಲಿಲ್ಲಾ, ಆದರೆ ನೊಣಗಳ ಹಿಂಡಿಗೆ ಹೆದರುವಂತಾಗಿದೆ. ಈ ಹಳ್ಳಿಗೆ ವೈರಿಗಳ ದಂಡೊಂದು ಲಗ್ಗೆ ಇಟ್ಟು ನಿತ್ಯ ಕಾಟ ಕೊಡುತ್ತಿವೆ. ಹರ್ತಿ ಗ್ರಾಮದ ಜನರ ಪರಸ್ಥಿತಿ ನಾಲ್ಕೈದು ತಿಂಗಳು ಹೇಳ ತೀರದಾಗಿದೆ.
ಕಾರಣ ಊರ ಪಕ್ಕದ ಕೋಳಿ ಫಾರ್ಮ್ ನಿಂದ ಲಗ್ಗೆ ಇಟ್ಟ ಈಗಗಳ ದಂಡುಪಾಳ್ಯ, ಈ ಜನರ ನೆಮ್ಮದಿ ಹಾಳು ಮಾಡಿದೆ.

ಒಂದಡೆ ಕೊರೊನಾ ಹಾವಳಿ, ಮತ್ತೊಂದಡೆ ನೊಣಗಳ ಹಾವಳಿಯಿಂದ ಅನಾರೋಗ್ಯಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಾರೆ. ಮಾವು, ಬೇವು ಹಣ್ಣಿನ ಸೀಜನ್‍ನಲ್ಲಿ ನೊಣಗಳು ಹೆಚ್ಚು ಇರುತ್ತವೆ. ಆದರೆ ಮಳೆಗಾಲದಲ್ಲೂ ಎಲ್ಲಿ ಕುಂತರೂ ಸಮಾಧಾನ ಆಗುವುದಿಲ್ಲ. ಅಡಿಗೆ ಮಾಡಿ ಊಟ ಮಾಡಲಿಕ್ಕೂ ಆಗುತ್ತಿಲ್ಲಾ, ನೀರು ಕುಡಿಯಲು ಆಗುತ್ತಿಲ್ಲ. ಅಂಗಡಿ, ಹೋಟೆಲ್ ನವರ ಪರಸ್ಥಿತಿ ನೋಣ ಹೊಡೆಯುವುದೇ ಕಾಯಕವಾಗಿದೆ.

ಮಕ್ಕಳು, ವೃದ್ಧರ ಪರಸ್ಥಿತಿ ಕೇಳತೀರದು. ಜಾನುವಾರುಗಳ ಮೇಲು ಜೇನು ಹುಳುವಿನಂತೆ ಕೂಡಿರುತ್ತವೆ. ಇದರಿಂದ ಗ್ರಾಮದಲ್ಲಿ ಅನೇಕರು ವಾಂತಿ, ಬೇಧಿ, ಜ್ವರ ಹೀಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬೇಸಿಗೆಯಲ್ಲಿ ಗಾಳಿ ಬೀಸಿಕೊಂಡಂತೆ ಮಳೆಗಾಲದಲ್ಲೂ ನೊಣಗಳ ಕಾಟಕ್ಕೆ ಗಾಳಿ ಬೀಸಿಕೊಳ್ಳಬೇಕಾದ ಪರಿಸ್ಥಿತಿ ಇವರದ್ದಾಗಿದೆ.
ಕೊರೊನಾ ಸಂದರ್ಭದಲ್ಲಿ ಮಕ್ಕಳನ್ನು ಕಟ್ಟಿಕೊಂಡು ವಾಸಿಸದೇ ಊರು ತೊರೆಯುವ ಸಂದರ್ಭ ಬಂದಿದೆ. ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ, ಕೋಳಿ ಫಾರ್ಮ್‍ಗಳನ್ನು ಬಂದ್ ಮಾಡಿ, ಜನರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಹಾಗೂ ತೊಂದರೆಗಳನ್ನು ತಪ್ಪಿಸಬೇಕು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಈ ಕೋಳಿ ಫಾರ್ಮ್ ಆಗಿ ನಾಲ್ಕೈದು ವರ್ಷಗಳಿಂದ ಆಗಾಗ ಇದೇ ಸಮಸ್ಯೆ ಎದುರಿಸುತ್ತಿದೆ. ಆದರೆ ಇತ್ತೀಚಿಗೆ ನೊಣಗಳ ಹಾವಳಿ ತುಂಬಾನೆ ಆಗಿದ್ದು, ನೊಣಗಳ ಕಾಟಕ್ಕೆ ಜನ ಸುಸ್ತಾಗಿದ್ದಾರೆ. ಊರಾಚೆಯ ಆಂಧ್ರ ಪ್ರದೇಶ ಮೂಲದ ಪ್ರಭಾವಿ ಗುತ್ತಿಗೆದಾರ ಸುಬ್ಬಾರೆಡ್ಡಿ ಸಂಬಂಧಿಗಳ ಈ ಕೋಳಿ ಫಾರ್ಮ್ ನಲ್ಲಿ ಸ್ವಚ್ಛತೆ, ಔಷಧ ಸಿಂಪಡಣೆ, ತ್ಯಾಜ್ಯ ವಿಲೇವಾರಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ನೊಣಗಳು ಹೆಚ್ಚಾಗಿ ಹರ್ತಿ ಜನರನ್ನು ಕಾಡತೊಡಗಿವೆ. ಸತ್ತ ಕೋಳಿಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ ಎಂದು ಆರೋಪಿಸಿದ್ದಾರೆ. ಇತ್ತೀಚಿಗೆ ಅತೀ ಹೆಚ್ಚು ನೊಣಗಳು ಉದ್ಭವಿಸಿ ಜನರ ನಿದ್ದೆಗೆಡಿಸಿದೆ.
ಪಿಡಿಓ, ಅಧ್ಯಕ್ಷರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಎಲ್ಲರಿಗೂ ಹೇಳಿದರೂ ನೊಣಗಳು ಕಡಿಮೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪ್ರಭಾವಿಯೊಬ್ಬರ ಫಾರ್ಮ್ ಆಗಿದ್ದರಿಂದ ಯಾರು ಇವರ ಗೋಜಿಗೆ ಹೊಗುತ್ತಿಲ್ಲ. ಗ್ರಾಮ ಪಂಚಾಯತ್ ನಿಂದ ಕೋಳಿ ಫಾರ್ಮ್‍ಗೆ ಕೇವಲ ಸೂಚನೆ ನೀಡ್ತಾರೆ, ಆದ್ರೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜನರಿಗೆ ಮಾರಕವಾಗುವ ಈ ಕೋಳಿ ಫಾರ್ಮ್‍ಗಳನ್ನ ಬಂದ್ ಮಾಡಬೇಕು. ಕೊರೊನಾ ಸಂದರ್ಭದಲ್ಲಿ ಜನ-ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂಬುದು ಎಲ್ಲರ ಬೇಡಿಕೆಯಾಗಿದೆ.