ತಿರುವನಂತಪುರ: ಭಾರತಕ್ಕೆ ಕೋವಿಡ್ ಕಾಲಿಟ್ಟ ಆರಂಭದಲ್ಲಿ ಉತ್ತಮ ರೀತಿಯ ನಿರ್ವಹಣೆ ತೋರಿದ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ಅವರಿಗೆ ಪ್ರತಿಷ್ಠಿತ ಸೆಂಟ್ರಲ್ ಯುರೋಪಿಯನ್ ಯೂನಿವರ್ಸಿಟಿ, ಓಪನ್ ಸೊಸೈಟಿ ಪ್ರಶಸ್ತಿ ನೀಡಿ ಗೌರವಿಸಲಿದೆ.
ಸಾರ್ವಜನಿಕ ಆರೋಗ್ಯ ಸೇವೆಗಳ ಬದ್ಧತೆಯನ್ನು ಗುರುತಿಸಿ ಸಿಇಯು ಕೊಡಮಾಡುವ ಈ ಪ್ರಶಸ್ತಿಗೆ ಶೈಲಜಾ ಅರ್ಹವಾಗಿಯೇ ಭಾಜನರಾಗಿದ್ದಾರೆ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ನಡೆದ 30 ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮುಕ್ತ ಸಮಾಜದ ಆದರ್ಶಗಳನ್ನು ಪೂರೈಸುವ ಅಸಾಧಾರಣ ಭಿನ್ನತೆಯ ವ್ಯಕ್ತಿಗಳಿಗೆ ವರ್ಷಂಪ್ರತಿ ನೀಡಲಾಗುವ ಓಪನ್ ಸೊಸೈಟಿ ಪ್ರಶಸ್ತಿಯನ್ನು ಘೋಷಿಸಿದೆ. ಆರಂಭದಲ್ಲಿ ಕೊರೊನಾ ಭಾರತದಲ್ಲಿ ಕಾಣಿಸಿಕೊಂಡ ಸಂದರ್ಭ, ಕೇರಳ ರಾಜ್ಯದಲ್ಲಿ ವ್ಯಾಪಾಕವಾಗಿತ್ತು. ಆ ಸಮಯದಲ್ಲಿ ರಾಜ್ಯದ ಆರೋಗ್ಯ ಸಚಿವರಾಗಿದ್ದ ಶೈಲಜಾ ಟೀಚರ್ ಸವಾಲಿನ ಕೆಲಸವನ್ನು ಉತ್ತಮವಾಗಿ ನಿಭಾಯಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು. ಇನ್ನು ಈ ಬಾರಿಯ ಕೇರಳ ರಾಜ್ಯ ಸಚಿವ ಸಂಪುಟದಲ್ಲಿ ಅವರು ಸಚಿವ ಸ್ಥಾನ ವಂಚಿತರಾಗಿರುವುದು ಅಚ್ಚರಿ ಮೂಡಿಸಿದೆ.