ಬಿಹಾರ: ನರ್ಸ್ ಗಳು ಮಾಡಿದ ಯಡವಟ್ಟಿನಿಂದ ಮಹಿಳೆಯೊಬ್ಬರು ಒಂದೇ ದಿನ ಎರಡು ಕೋವಿಡ್ ವ್ಯಾಕ್ಸಿನ್ ಗಳನ್ನು ಚುಚ್ಚಿಸಿಕೊಂಡ ಘಟನೆ ಜೂನ್ 16ರಂದು ನಡೆದಿದೆ. ಈ ಹಿನ್ನಲೆಯಲ್ಲಿ ತಪ್ಪೆಸಗಿದ ಶುಶ್ರೂಷಕಿಯರಿಗೆ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ.
ಪಾಟ್ನಾದ ಫುನ್’ಫುನ್ ಬ್ಲಾಕ್ ಎಂಬಲ್ಲಿ ಸುನೀಲಾ ದೇವಿ ಎಂಬ ಮಹಿಳೆ ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಕ್ಕೆ ಬಂದಿದ್ದರು. ರಿಜಿಸ್ಟರ್ ಬಳಿಕ ನರ್ಸ್ ಒಬ್ಬರು ಆಕೆಗೆ ಕೋವಿಶೀಲ್ಡ್ ಲಸಿಕೆ ನೀಡಿದ್ದಾರೆ. ಲಸಿಕೆ ಪಡೆದ ನಂತರ ಐದು ನಿಮಿಷ ಕುಳಿತುಕೊಳ್ಳಬೇಕು ಎಂದು ಹೇಳಿ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ವಿಶ್ರಾಂತಿ ಪಡೆಯುತ್ತ ಕುಳಿತಿದ್ದ ಮಹಿಳೆಯ ಬಳಿ ಬಂದ ಇನ್ನೊಬ್ಬ ನರ್ಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಮಹಿಳೆಗೆ ನೀಡಲು ಮುಂದಾಗಿದ್ದಾರೆ. ಆಗ ಮಹಿಳೆ ನಾನು ಈಗಾಗಲೇ ಲಸಿಕೆ ತೆಗೆದುಕೊಂಡ ಬಗ್ಗೆ ತಿಳಿಸಿದ್ದಾರೆ. ಮಹಿಳೆಯ ಮಾತು ಕೇಳದ ನರ್ಸ್ ಈ ಲಸಿಕೆಯನ್ನೂ ತೆಗೆದುಕೊಳ್ಳಬೇಕು ಎಂದು ಹೇಳಿ ಲಸಿಕೆ ಚುಚ್ಚಿದ್ದಾಳೆ. ಬಳಿಕ ಈ ವಿಚಾರ ಆರೋಗ್ಯಧಿಕಾರಿಗಳ ಗಮನಕ್ಕೆ ಬಂದಿದೆ. ಎರಡೆರೆಡು ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಸುನೀಲಾ ದೇವಿ ಒತ್ತಾಯಿಸಿದ್ದಾರೆ.
ಕೋವಿಶೀಲ್ಡ್ ಡೋಸೇಜ್ ತೆಗೆದುಕೊಂಡ ನಂತರ ಎರಡನೇ ಡೋಸೇಜ್, ಕೊವ್ಯಾಕ್ಸಿನ್ ತೆಗೆದುಕೊಳ್ಳಲು ನಿಗದಿತ ದಿನಗಳ ಅಂತರ ಬೇಕು ಎನ್ನುವ ನಿಯಮವಿದೆ. ಇಲ್ಲಿ ತಪ್ಪೆಸಗಿದ ಇಬ್ಬರು ನರ್ಸ್ ಗಳಾದ ಚಂಚಲ ದೇವಿ ಮತ್ತು ಸುನೀತಾ ಕುಮಾರಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಸುನೀಲಾ ದೇವಿ ಮೇಲೆ ವೈದ್ಯಕೀಯ ನಿಗಾ ಇಡಲಾಗಿದೆ.