ಚಂಡೀಗಢ: ಒಂದು ತಿಂಗಳ ಕಾಲ ಕೊರೋನಾ ವಿರುದ್ಧದ ಹೋರಾಟ ನಡೆಸಿದ್ದ ಮಿಲ್ಖಾ ಸಿಂಗ್ (91) ಜೂ.19 ನಿಧನರಾಗಿದ್ದಾರೆ.
ಈ ಮಾಹಿತಿಯನ್ನು ಕುಟುಂಬದ ವಕ್ತಾರರು ದೃಢಪಡಿಸಿದ್ದಾರೆ. ಜೂ.14 ರಂದು ಮಿಲ್ಖಾ ಸಿಂಗ್ ಪತ್ನಿ, ಭಾರತ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಕೊರೋನಾದಿಂದ ಸಾವನ್ನಪ್ಪಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಿಲ್ಖಾ ಸಿಂಗ್ (91) ಗಾಲ್ಫರ್ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕೊರೊನಾದಿಂದ ತೀವ್ರವಾಗಿ ಅನಾರೋಗ್ಯ ಎದುರಿಸಿದ್ದ ಮಿಲ್ಖಾ ಸಿಂಗ್ ಚೇತರಿಸಿಕೊಂಡು ಜೂ.16 ರಂದು ಐಸಿಯುನಿಂದ ಹೊರ ಬಂದಿದ್ದರು. ಆದರೆ ಜೂ.18 ರಂದು ರಾತ್ರಿ 11:30 ರ ವೇಳೆಗೆ ಮೃತಪಟ್ಟಿದ್ದಾರೆ.
ಏಕಾ ಏಕಿ ಜ್ವರ ಮತ್ತು ಆಕ್ಸಿಜನ್ ಪ್ರಮಾಣ ಕುಸಿತ ಕಂಡ ಪರಿಣಾಮ ಮಿಲ್ಖಾ ಸಿಂಗ್ ಸಾವನ್ನಪ್ಪಿದ್ದಾರೆ.
ಕಳೆದ ತಿಂಗಳು ಕೊರೋನಾ ಸೋಂಕಿಗೆ ಗುರಿಯಾಗಿದ್ದ ಮಿಲ್ಖಾ ಸಿಂಗ್ ಜೂ.16 ರಂದು ಕೊರೋನಾ ಸೋಂಕು ಪತ್ತೆ ಪರೀಕ್ಷೆ ನೆಗೆಟೀವ್ ಬಂದಿತ್ತು. ಗುರುವಾರದಂದು ಸಂಜೆ ಮಿಲ್ಖಾ ಸಿಂಗ್ ಅವರ ಆರೋಗ್ಯ ಸ್ಥಿರವಾಗಿತ್ತು.
ಮಿಲ್ಖಾ ಸಿಂಗ್ ನಾಲ್ಕು ಬಾರಿ ಏಷ್ಯನ್ಸ್ ಗೇಮ್ಸ್ ನಲ್ಲಿ ಚಿನ್ನದ ಪದಕದ ವಿಜೇತರಾಗಿದ್ದು, 1958 ರ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. 1960 ರ ರೋಮ್ ಒಲಂಪಿಕ್ಸ್ ನಲ್ಲಿ 400 ಮೀಟರ್ ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಗೆದ್ದಿದ್ದು ಮಿಲ್ಖಾ ಅವರ ಅತ್ಯುತ್ತಮ ಸಾಧನೆಯಾಗಿದೆ. 1956 ಹಾಗೂ 1964 ರ ಒಲಂಪಿಕ್ಸ್ ನಲ್ಲಿ ಮಿಲ್ಖಾ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು.