ಬೆಂಗಳೂರು: ನಮ್ಮದು ಸಿದ್ದಾಂತದಿಂದ ಬಂದ ಪಕ್ಷ. ಇಲ್ಲಿ ಎಲ್ಲರೂ ಸಾಮಾನ್ಯ ಕಾರ್ಯಕರ್ತರೇ. ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹರನ್ನು ಕರೆದು ಸಂಸದರನ್ನಾಗಿ ಮಾಡಿದೆವು. ನಾನೂ ಸಾಮಾನ್ಯ ಕಾರ್ಯಕರ್ತ, ಪ್ರಹ್ಲಾದ್ ಜೋಶಿ, ಈಶ್ವರಪ್ಪನವರು ಸಾಮಾನ್ಯ ಕಾರ್ಯಕರ್ತರೇ. ಅದೇ ರೀತಿ ಯಡಿಯೂರಪ್ಪನವರು ಸಾಮಾನ್ಯ ಕಾರ್ಯಕರ್ತರೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪಕ್ಷದಲ್ಲಿ ಯಾರೂ ದೊಡ್ಡವರಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಪಕ್ಷದ ಸಿದ್ದಾಂತ ಮೆಚ್ಚಿ ಬಂದವರು ಮಾತ್ರ ಪಕ್ಷದಲ್ಲಿದ್ದೇವೆ. ಬೀದಿಯಲ್ಲಿ ನಿಂತು ಹೋರಾಟ ಮಾಡಿ ಪಕ್ಷ ಕಟ್ಟಿದ್ದು, ಪಕ್ಷದ ಸಿದ್ದಾಂತವೇ ಮುಖ್ಯವಾಗಿತ್ತು. ನಾವಿಲ್ಲಿ ಯಾವ ಜಾತಿ, ಧರ್ಮ, ನಂಬಿ ಬಂದಿಲ್ಲ, ಪಕ್ಷದ ಸಿದ್ದಾಂತ ಒಪ್ಪಿ ಬಂದಿದ್ದೇವೆ. ಯಡಿಯೂರಪ್ಪ ಒಬ್ಬರೇ ಶಾಸಕರಿದ್ದಾಗಲೂ, ಪಕ್ಷದ ಬಾವುಟ ಕಟ್ಟಿ ಪಕ್ಷ ಬೆಳೆಸಿದ್ದೇವೆ. ಮನೆಯಲ್ಲಿ ದೇವೇಗೌಡರ ಪಕ್ಷ ಸೇರಲು ಹೇಳಿದಾಗಲೂ ಈ ಪಕ್ಷದ ಸಿದ್ದಾಂತ ಮೆಚ್ಚಿ ಬಂದಿದ್ದೇನೆ. ಯಾಕೆಂದರೆ ಬಿಜೆಪಿ ಸಿದ್ದಾಂತ ದೇಶಕ್ಕೆ ಹಿತವಾಗಿತ್ತು’ ಎಂದವರು ಹೇಳಿದರು.
ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ಹಿತಾಸಕ್ತಿ, ಪಕ್ಷದ ಹಿತ ದೃಷ್ಟಿಯಿಂದ ಚರ್ಚೆ ನಡೆಸುತ್ತೇವೆ. ಎಲ್ಲಾ ವಿಚಾರಗಳನ್ನು ಮಾಧ್ಯಮದ ಮುಂದೆ ಪ್ರಸ್ತಾಪ ಮಾಡಲಾಗುವುದಿಲ್ಲ. ಪಕ್ಷದ ಒಳಿತು, ಕೆಡುಕುಗಳ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಸಂಪುಟ ಪುನರ್ ರಚನೆ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರವಿದೆ. ನಾವು ಪಕ್ಷದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಬಹುದು ಅಷ್ಟೇ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.