ಪಿರಿಯಾಪಟ್ಟಣ: ತನ್ನ ಸ್ವಂತ ಮಗಳನ್ನೇ ಕಡಿದು ಕೊಂದು ತಂದೆ ಪೊಲೀಸರಿಗೆ ಶರಣಾದ ಘಟನೆ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಮಹದೇಶ್ವರ ದೇವಸ್ಥಾನ ರಸ್ತೆ ಬಳಿಯ ನಿವಾಸಿ ಜಯರಾಮ್ ಮಗಳನ್ನು ಕೊಂದ ಆರೋಪಿ. ಆತ ತನ್ನ ಮಗಳು ಗಾಯತ್ರಿ ಎಂಬಾಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಗಾಯತ್ರಿ ಅನ್ಯಕೋಮಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು.
ತಂದೆ ಮತ್ತು ಮನೆಯವರು ಆಕೆಗೆ ಬುದ್ದಿವಾದ ಹೇಳಿದ್ದರು. ಆದರೆ ಅವರ ಮಾತಿಗೆ ಬಗ್ಗದ ಆಕೆ ಇತ್ತೀಚೆಗೆ ಆತನನ್ನು ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಇದರಿಂದ ಕುಪಿತಗೊಂಡ ತಂದೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಊಟ ಕೊಡಲು ಬಂದ ಮಗಳನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪಿರಿಯಾಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ.