ಮಂಡ್ಯ: ರಾಜ್ಯ ಸರ್ಕಾರ ಕೊರೋನಾ ಹೆಸರಿನಲ್ಲಿ ಮಾಡಿದ ಲೂಟಿ ಹಣದಲ್ಲಿ ಪಾಲು ಕೊಂಡೊಯ್ಯಲು ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಮದ್ದೂರಿನಲ್ಲಿ ನಡೆದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮವೊಂದನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಕಳೆದೊಂದು ವರ್ಷಗಳಿಂದ ರಾಜ್ಯ ಸರ್ಕಾರ ಕೊರೋನದಿಂದ ಸಂಕಷ್ಟಕ್ಕೊಳಗಾಗಿರುವ ಜನರ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ನಿರಂತರವಾಗಿ ದೋಚುತ್ತಿದೆ. ಅದರಲ್ಲಿ ಕೇಂದ್ರಕ್ಕೆ ಪಾಲು ಕೊಡಲಾಗುತ್ತದೆ. ಆ ಪಾಲನ್ನು ದೆಹಲಿ ಕೊಂಡೊಯ್ಯಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಕರ್ನಾಟಕಕ್ಕೆ ಕಳುಹಿಸಲಾಗಿದೆ. ರಾಜ್ಯದ ನಾಯಕರ ನಡುವಿನ ಗೊಂದಲ ನಿವಾರಣೆ ಉದ್ದೇಶ ಕೇವಲ ನೆಪವಷ್ಟೇ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೋ ಅಥವಾ ಬೇರೆಯವರನ್ನು ಮಾಡುತ್ತಾರೋ ಎಂಬುವುದು ಅವರಿಗೆ ಬಿಟ್ಟ ವಿಷಯ. ಒಬ್ಬ ರಾಜಕೀಯ ವ್ಯಕ್ತಿಗಾಗಿ ಮಠಮಾನ್ಯಗಳ ಸ್ವಾಮೀಜಿಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ಹಿಂದೆ ನನ್ನ ಸರ್ಕಾರ ಪಥನವಾಗುವಾಗ ಸರ್ಕಾರವನ್ನು ಉಳಿಸಲು ನಾನು ಯಾವ ಮಠಾಧೀಶರ ಹತ್ತಿರವೂ ಹೋಗಿರಲಿಲ್ಲ. ಒಕ್ಕಲಿಗ ಮಠಾಧೀಶರು ನನ್ನ ಸರ್ಕಾರವನ್ನು ಉಳಿಸಲು ಪ್ರಯತ್ನಿಸಿರಲಿಲ್ಲ. ಅಷ್ಟು ದೊಡ್ಡತನ ನಮ್ಮಲ್ಲಿತ್ತು. ಅದನ್ನು ಬಿಟ್ಟು ಜಾತಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಸಲಹೆ ಅವರು ಹೇಳಿದ್ದಾರೆ.