ಕೊಚ್ಚಿನ್: ಕೇರಳ ರಾಜ್ಯದ ಕೊಚ್ಚಿ ಬಳಿ ಅರಬ್ಬೀ ಸಮುದ್ರದಲ್ಲಿ ಗೂಗಲ್ ನಕ್ಷೆಯಲ್ಲಿ ಇತ್ತೀಚೆಗೆ ನಿಗೂಢ ದ್ವೀಪವೊಂದು ಪತ್ತೆಯಾಗಿದೆ. ಹುರುಳಿ ಆಕಾರದ ನೀರೊಳಗಿನ ದ್ವೀಪ ಗೂಗಲ್ ನಕ್ಷೆಯಲ್ಲಿ ಪತ್ತೆಯಾಗಿದ್ದು, ಭಾರೀ ಅಚ್ಚರಿಯನ್ನು ಮೂಡಿಸಿದೆ.
ಚೆಲ್ಲಾನಮ್ ಕಾರ್ಶಿಕಾ ಪ್ರವಾಸೋದ್ಯಮ ಅಭಿವೃದ್ಧಿ ಸೊಸೈಟಿ ನಿಗೂಢ ದ್ವೀಪವನ್ನು ತೋರಿಸುವ ಉಪಗ್ರಹ ಚಿತ್ರವನ್ನು ಪತ್ತೆಹಚ್ಚಿದೆ. ಸೊಸೈಟಿ ಅಧ್ಯಕ್ಷ ವಕೀಲ ಕೆಎಕ್ಸ್ ಜುಲಪ್ಪನ್ ದ್ವೀಪದಂತಹ ರಚನೆ ಇರುವ ಗೂಗಲ್ ನಕ್ಷೆಗಳ ಸ್ಕ್ರೀನ್‌ಶಾಟ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು ಇದು ವ್ಯಾಪಕವಾಗಿ ವೈರಲ್ ಆಗಿದೆ.
ನಿಗೂಢ ದ್ವೀಪ ಪತ್ತೆಯಾದ ಬಗ್ಗೆ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯಕ್ಕೆ ಸೊಸೈಟಿ ಮಾಹಿತಿ ನೀಡಿದೆ. ಗೂಗಲ್ ನಕ್ಷೆಗಳ ಪ್ರಕಾರ, 8 ಕಿ.ಮೀ ಉದ್ದ ಮತ್ತು 3.5 ಕಿ.ಮೀ ಅಗಲವಿರುವ ಹುರುಳಿ ಆಕಾರದ ದ್ವೀಪವೊಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಕುಫೋಸ್‌ನ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಫೋಸ್‌ನ ಉಪಕುಲಪತಿ ಕೆ ರಿಜಿ ಜಾನ್, ಇದು ಜಗತ್ತಿನಾದ್ಯಂತ ನಾವು ನೋಡುವ ಸಾಮಾನ್ಯ ನೀರೊಳಗಿನ ದ್ವೀಪದಂತೆ ಕಾಣುತ್ತದೆ. ಈ ಬಗ್ಗೆ ಅವಲೋಕನಗಳು ಮಾಡಲಾಗುತ್ತದೆ. ಈ ದ್ವೀಪಕ್ಕೂ ಒಂದು ನಿರ್ದಿಷ್ಟ ಆಕಾರವಿದೆ. ಆದರೆ ಅದು ಮರಳು ಅಥವಾ ಜೇಡಿಮಣ್ಣಿನಿಂದ ಕೂಡಿದೆಯೇ ಮತ್ತು ಎರಡೂ ಕೂಡಾ ಇದೆಯೇ ಎಂಬುದು ನಮಗೆ ತಿಳಿದಿಲ್ಲ. ತನಿಖೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದ್ದಾರೆ.