ಉತ್ತರ ಪ್ರದೇಶ: ಮುಸಲ್ಮಾನ ವೃದ್ಧರೊಬ್ಬರ ಮೇಲೇ ಯುವಕರ ಗುಂಪೊoದು ಹಲ್ಲೆ ನಡೆಸಿದ ಘಟನೆ ರಾಜ್ಯದ ಗಾಝಿಯಾಬಾದ್ ನಿಂದ ವರದಿಯಾಗಿತ್ತು. ವಿಚಾರಣೆ ಬಳಿಕ ಇದು ತಾಯ್ತ ಕಟ್ಟುವ ವಿಚಾರದಲ್ಲಿ ನಡೆದ ಜಗಳ ಎಂದು ಪೊಲೀಸರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವೃದ್ಧನ ಮಗ, ನನ್ನ ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದಿದ್ದಾನೆ.
ಅಬ್ದುಲ್ ಸಮದ್ ಸೈಫಿ ಎಂಬ ವೃದ್ಧನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವೃದ್ಧನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಲಾಕೆಯಿಂದ ಹಲ್ಲೆ ನಡೆಸಿದ್ದರು. ನೋವು ತಾಳಲಾರದೆ ವೃದ್ಧ ಅಲ್ಲಾಹ್, ಅಲ್ಲಾಹ್ ಎಂದಾಗ, ಯುವಕರು ಮತ್ತೆ ಥಳಿಸಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿದ್ದರು. ಬಳಿಕ ವೃದ್ಧನಿಗೆ ಪಿಸ್ತುಲ್ ತೋರಿಸಿ ಗಡ್ಡ ಕತ್ತರಿಸಿ ವಿಕೃತಿ ಮೆರೆದಿದ್ದರು. ವಿಚಾರಣೆ ನಡೆಸಿದ ಪೊಲೀಸರು ತಾಯಿತಾ ಕಟ್ಟುವ ವಿಚಾರದಲ್ಲಿ ಯುವಕರ ಗುಂಪು ಮತ್ತು ವೃದ್ಧ ನಡುವೆ ನಡೆದ ಜಗಳಕ್ಕೆ ಕಾರಣ ಎಂದಿದ್ದರು.
ಘಟನೆಗೆ ಸಂಬoಧಿಸಿದoತೆ ಟ್ವೀಟ್‌ಗಳ ಮೂಲಕ ಮತೀಯ ಭಾವನೆಗಳನ್ನು ಕೆರಳಿಸಲಾಗಿದೆ ಎಂದು ಆರೋಪಿಸಿ ಗಾಝಿಯಾಬಾದ್ ಪೊಲೀಸರು ಕೆಲ ಪತ್ರಕರ್ತರ ಸಹಿತ ಎಂಟು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದರ ಬೆನ್ನಿಗೇ ಸಮದ್ ಕುಟುಂಬ ಪ್ರತಿಕ್ರಿಯಿಸಿ ಆತ ತಾಯತಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಆರೋಪಗಳನ್ನು ನಿರಾಕರಿಸಿದೆ.
“ನನ್ನ ತಂದೆ ತಾಯತಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿರುವುದು ಸುಳ್ಳು. ನಮ್ಮ ಕುಟುಂಬದಲ್ಲಿ ಯಾರೂ ಈ ಕೆಲಸ ಮಾಡುತ್ತಿಲ್ಲ. ನಾವು ಬಡಗಿಗಳು. ಪೊಲೀಸರು ಸರಿಯಾದ ಮಾತುಗಳನ್ನು ಹೇಳುತ್ತಿಲ್ಲ, ಅವರು ತನಿಖೆ ನಡೆಸಿ ಸಾಬೀತು ಪಡಿಸಲಿ” ಎಂದು ಸಮದ್ ಪುತ್ರ ಬಬ್ಲೂ ಸೈಫೀ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.